ಕೊಚ್ಚಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಅತ್ಯಂತ ಹಿರಿಯ ಪ್ರಚಾರಕರಲ್ಲಿ ಒಬ್ಬರಾದ ಕೇರಳದ ಪಿ.ಪರಮೇಶ್ವರನ್ ಇಂದು ನಿಧನರಾಗಿದ್ದಾರೆ.
ಭಾರತೀಯ ಜನಸಂಘದ ಮಾಜಿ ನಾಯಕರೂ ಆಗಿದ್ದ ಪರಮೇಶ್ವರನ್ ವಯೋಸಹಜ ಕಾಯಿಲೆಗೆ ಪಾಲಕ್ಕಾಡ್ನ ಒಟ್ಟಪಾಲಂನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ನಸುಕಿನ ಜಾವ 12.10 ಗಂಟೆ ಸುಮಾರಿಗೆ ಅಸು ನೀಗಿದ್ದಾರೆ.
ಆರ್ಎಸ್ಎಸ್ ನಾಯಕನ ಸಾವಿಗೆ ಕಂಬನಿ ಮಿಡಿದಿರುವ ಪ್ರಧಾನಿ ಮೋದಿ, ಪರಮೇಶ್ವರನ್ ಭಾರತ ಮಾತೆಯ ಹೆಮ್ಮೆಯ ಪುತ್ರ. ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಕುರಿತು ಜಾಗೃತಿ ಮೂಡಿಸುವಲ್ಲಿ, ಬಡವರ ಸೇವೆ ಮಾಡುವಲ್ಲಿ ತಮ್ಮ ಜೀವನ ಮುಡಿಪಿಟ್ಟಿದ್ದರು. ಇವರ ಆಲೋಚನೆ ಹಾಗೂ ಬರಹ ಅಸಾಧಾರಣವಾಗಿದ್ದವು. ಇವರೊಂದಿಗೆ ಹಲವು ಬಾರಿ ಮಾತನಾಡುವ ಅದೃಷ್ಟ ನನಗೆ ಸಿಕ್ಕಿತ್ತು. ಅವರು ಅತ್ಯುನ್ನತ ಬುದ್ಧಿಜೀವಿ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
1927ರಲ್ಲಿ ಜನಿಸಿದ್ದ ಪರಮೇಶ್ವರನ್, 1951 ರಿಂದ ಆರ್ಎಸ್ಎಸ್ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಭಗವದ್ಗೀತೆ ಹಾಗೂ ರಾಮಾಯಣದ ಸಾರ ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ವಿಚಾರ ಕೇಂದ್ರ, ದೀನ್ದಯಾಳ್ ಉಪಾಧ್ಯಾಯ ಇನ್ಸ್ಟಿಟ್ಯೂಟ್ನ ನಿರ್ದೇಶಕರಾಗಿ, ಕನ್ಯಾಕುಮಾರಿ ವಿವೇಕಾನಂದ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಪದ್ಮಶ್ರೀ, ಪದ್ಮ ವಿಭೂಷಣ ಹಾಗೂ ಅಮೃತ ಕೀರ್ತಿ ಪ್ರಶಸ್ತಿಗಳು ಒಲಿದು ಬಂದಿವೆ.