ನವದೆಹಲಿ: ಮಾಲೆಗಾಂವ್ ಸ್ಫೋಟ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು, ಮುಂಬೈ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಿ.ಎಸ್. ಪಡಲ್ಕರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರಿ ಸಂತ್ರಸ್ತನ ಕುಟುಂಬದ ಸದಸ್ಯರೊಬ್ಬರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
2008ರ ಸೆ.29 ರಂದು ಮಹಾರಾಷ್ಟ್ರದ ಮಾಲೆಗಾಂವ್ನ ಮಸೀದಿ ಬಳಿ ಸಂಭವಿಸಿದ್ದು ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದರು. ಪ್ರಕರಣದ ಆರೋಪ ಭೋಪಾಲ್ನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರ ಮೇಲಿದೆ.
ಪ್ರಕರಣದ ವಿಚಾರಣೆಯನ್ನ ನ್ಯಾಯಾಧೀಶ ವಿ.ಎಸ್. ಪಡಲ್ಕರ್ ನಡೆಸುತ್ತಾ ಬಂದಿದ್ದು, ಇದೀಗ ಫೆ.29 ರಂದು ಅವರ ಅಧಿಕಾರವಧಿ ಮುಕ್ತಾಯವಾಗಲಿದೆ. ಪಡಲ್ಕರ್ ಅವರು ಪ್ರಕರಣ ಸಂಬಂಧ 140 ಕ್ಕೂ ಹೆಚ್ಚು ಸಾಕ್ಷಿಗಳನ್ನು ಪರಿಶೀಲಿಸಿದ್ದಾರೆ. ಇದೀಗ ಇವರು ನಿವೃತ್ತಿ ಹೊಂದಿ, ಇನ್ನೊಬ್ಬ ನ್ಯಾಯಾಧೀಶ ವಿಚಾರಣೆ ನಡೆಸಿದರೆ ವಿಚಾರಣೆ ಮತ್ತೆ ವಿಳಂಬವಾಗಲಿದೆ. ಹೀಗಾಗಿ ಪಡಲ್ಕರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.