ಹರಿಯಾಣ: ಬೃಹದಾಕಾರದ ಆಮೆಯನ್ನು ಹೋಲುವ ಆಕೃತಿ. ಇದು ಬರೋಬ್ಬರಿ 6.6 ಅಡಿ ಎತ್ತರವಿದೆ. ಅಷ್ಟೇ ಅಲ್ಲ, ಸುಮಾರು 23 ಅಡಿಗಳಷ್ಟು ಉದ್ದಕ್ಕಿದೆ. ಅಷ್ಟಕ್ಕೂ ಇದನ್ನg ಯಾವುದರಿಂದ ನಿರ್ಮಾಣ ಮಾಡಿದ್ದಾರಪ್ಪ? ಅನ್ನೋ ಗೊಂದಲ ನಿಮ್ಮದಿರಬಹುದು ಅಲ್ವೇ?. ಯೆಸ್, ಇದನ್ನು ಕೇವಲ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಸಿ ನಿರ್ಮಿಸಲಾಗಿದೆ.
ಇದು ಹರಿಯಾಣದ ಕುರುಕ್ಷೇತ್ರದಲ್ಲಿ ನಿರ್ಮಾಣವಾಗಿರೋ ಪ್ಲಾಸ್ಟಿಕ್ ಆಮೆ. 87 ಸಾವಿರದ 297 ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಸಿ ಈ ಬೃಹತ್ ಗಾತ್ರದ ಆಮೆಯನ್ನು ಉತ್ಸಾಹಿ ಯುವಕರ ತಂಡ ನಿರ್ಮಿಸಿದೆ. ಜಗತ್ತಿಗೆ ಜಗತ್ತೇ ಪ್ಲಾಸ್ಟಿಕ್ ಎಂಬ ಮಹಾಮಾರಿಯಿಂದ ತೊಂದರೆಗೊಳಗಾಗಿದ್ದು, ಕನಿಷ್ಟ ಮಟ್ಟಿಗೆ ಏಕಬಳಕೆ ಪ್ಲಾಸ್ಟಿಕ್ಗಳನ್ನು ನಿರ್ಮೂಲನೆ ಮಾಡೋ ಸಂದೇಶವನ್ನು ಈ ಪ್ಲಾಸ್ಟಿಕ್ ಆಮೆಯ ನಿರ್ಮಾಣದ ಮೂಲಕ ಈ ಯುವಕರ ತಂಡ ನೀಡುತ್ತಿದೆ.
ಕುರುಕ್ಷೇತ್ರದವಳೇ ಆದ ರಿತು ಎಂಬ ವಿದ್ಯಾರ್ಥಿನಿ ಇತರ ನೂರು ಉತ್ಸಾಹಿ ಯುವಕರ ತಂಡದೊಂದಿಗೆ ಈ ಪ್ಲಾಸ್ಟಿಕ್ ಆಮೆಯನ್ನು ರಚಿಸಿದ್ದಾಳೆ. ಇದಕ್ಕೊಂದು ಬಲವಾದ ಕಾರಣವೂ ಇದೆ. ಈಕೆಯ ತಂದೆ ಕ್ಯಾನ್ಸರ್ ಕಾಯಿಲೆಯಿಂದ ತೀರಿಹೋದರಂತೆ. ಹೀಗಾಗಿ ಪರಿಸರಕ್ಕೆ ಹಾನಿಕಾರವಾದ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕೆಂಬ ಪ್ರತಿಜ್ಞೆಯನ್ನು ರಿತು ಮಾಡಿದ್ದಾಳೆ.
ವಿಶೇಷವೆಂದರೆ ಈ ಬೃಹತ್ ಗಾತ್ರದ ಆಮೆಯ ಆಕಾರವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಸಿಯೇ ನಿರ್ಮಿಸಲಾಗಿದೆ. ಸದ್ಯ ಈ ಯುವಕರ ತಂಡ ವಲ್ಡ್ ರೆಕಾರ್ಡ್ ಮಾಡುವ ಹಂಬಲದಲ್ಲಿದ್ದು ಅದಕ್ಕಾಗಿ ಅರ್ಜಿಯನ್ನೂ ಹಾಕಿದ್ದಾರೆ. ಏನೇ ಇರಲಿ, ಪ್ಲಾಸ್ಟಿಕ್ ಮಾಹಾಮಾರಿ ಪರಿಸರದಿಂದ ಕೊಂಚ ಮಟ್ಟಿಗಾದರೂ ನಿರ್ಮೂಲನೆಯಾದರೆ ವಾತಾವರಣಕ್ಕೆ ಅಷ್ಟೇ ಸಾಕು.