ಹೈದರಾಬಾದ್: ಕೊರೊನಾ ವೈರಸ್ನ ಮುಖ್ಯ ಲಕ್ಷಣ ಉಸಿರಾಟದ ತೊಂದರೆಯಾಗಿದ್ದರೂ ಕೆಲ ವಿರಳ ಪ್ರಕರಣಗಳಲ್ಲಿ ಕಣ್ಣು ಬೇನೆ ಅಥವಾ ಕಂಜಕ್ಟಿವಿಟಿಸ್ ಸಹ ಕೊರೊನಾ ಲಕ್ಷಣವಾಗಿರಬಹುದು ಎಂದು ಚೀನಾ ಸಂಶೋಧನಾಕಾರರು ಹೇಳಿದ್ದಾರೆ.
ಕಣ್ಣು ಬೇನೆ ಬಂದವರ ಕಣ್ಣು ಹಾಗೂ ಮೂಗು ಎರಡರ ದ್ರವದಲ್ಲಿಯೂ ಕೊರೊನಾ ವೈರಸ್ ಕಂಡು ಬಂದಿದ್ದರಿಂದ ಕೆಲ ಪ್ರಕರಣಗಳಲ್ಲಿ ಕಂಜಕ್ಟಿವಿಟಿಸ್ ಸಹ ಕೊರೊನಾ ಲಕ್ಷಣವಾಗಿಬಹುದಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮೂಗಿನ ದ್ರವದ ಮೂಲಕ ಮಾತ್ರ ಕೊರೊನಾ ಹರಡುತ್ತದೆ ಎಂಬುದು ಇಲ್ಲಿಯವರೆಗೆ ತಿಳಿಯಲಾಗಿತ್ತು. ಆದರೆ, ಸೋಂಕಿತ ವ್ಯಕ್ತಿಯೊಬ್ಬ ತನ್ನ ಕಣ್ಣುಗಳನ್ನು ಉಜ್ಜಿಕೊಂಡು ಮತ್ತೊಬ್ಬರನ್ನು ಮುಟ್ಟಿದರೆ ಕೊರೊನಾ ಹರಡುತ್ತದೆಯಾ ಎಂಬುದನ್ನು ಈಗ ಪರಿಶೀಲಿಸಲಾಗುತ್ತಿದೆ.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಲವಾರು ಕೊರೊನಾ ರೋಗಿಗಳಿಗೆ ಕಣ್ಣು ಬೇನೆ ಸಹ ಬಂದಿತ್ತು ಎಂದು ಚೀನಾದ ಥ್ರೀ ಗಾರ್ಜಸ್ ವಿಶ್ವವಿದ್ಯಾಲಯದ ನೇತ್ರಶಾಸ್ತ್ರ ವಿಭಾಗದ ಡಾ. ಲಿಯಾಂಗ್ ಹೇಳಿದ್ದಾರೆ.
ಹೀಗಾಗಿ ಇನ್ನು ಮುಂದೆ ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾಸ್ಕ್, ಪಿಪಿಇ ಜೊತೆಗೆ ಸುರಕ್ಷತಾ ಕನ್ನಡಕವನ್ನು ಸಹ ಧರಿಸಲು ಆರಂಭಿಸಬಹುದು.