ಕೊಚ್ಚಿ (ಕೇರಳ) : ಪೌರತ್ವ ತಿದ್ದುಪಡಿ ಕಾಯ್ದೆ( ಸಿಎಎ) ಅನುಷ್ಠಾನಗೊಳಿಸದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕೇರಳ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಒಂದು ಸಲ್ಲಿಕೆಯಾಗಿದೆ.
ಸಿಎಎ ಜಾರಿಯಾದರೆ ಮುಸ್ಲಿಮರನ್ನು ಹೊರತುಪಡಿಸಿ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದ ಹಿಂದೂ, ಸಿಖ್ಖ್, ಕ್ರಿಶ್ಚಿಯನ್, ಪಾರ್ಸಿ, ಜೈನ್ ಮತ್ತು ಬೌದ್ಧ ಧರ್ಮಗಳ ಅಕ್ರಮ ವಲಸಿಗರಿಗೆ ಅದರಿಂದ ಅನುಕೂಲವಾಗಲಿದೆ. ಅಲ್ಲದೆ ಈ ಕಾಯ್ದೆ ನೇರವಾಗಿ ಮುಸ್ಲಿಂ ಸಮುದಾಯವನ್ನು ಧರ್ಮ ಮತ್ತು ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯವೆಸಗುತ್ತದೆ ಎಂದು ಪಿಐಎಲ್ನಲ್ಲಿ ದೂರಲಾಗಿದೆ.
ಸಲ್ಲಿಕೆಯಾಗಿರುವ ಪಿಐಎಲ್ ಮುಖ್ಯ ನ್ಯಾಯಮೂರ್ತಿ ಎಸ್. ಮಣಿಕುಮಾರ್ ಹಾಗೂ ನ್ಯಾಯಮೂರ್ತಿ ಶಾಜಿ ಪಿ ಚಾಲಿ ನೇತೃತ್ವದ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು, ಸದ್ಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಇನ್ನು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿರುವ ನ್ಯಾಯಾಧೀಶರು, ಸಿಎಎ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಏನೇ ತೀರ್ಮಾನಗಳು ಬಂದರೂ ಅದನ್ನು ನಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ. ಸಿಎಎ ವಿರೋಧಿಸಿ ಸುಪ್ರೀಂ ಕೋರ್ಟ್ನಲ್ಲಿ ಇದುವರೆಗೆ ಒಟ್ಟು 60 ಪಿಐಎಲ್ ಸಲ್ಲಿಕೆಯಾಗಿದೆ ಎಂದು ಸರ್ಕಾರದ ಪರ ವಕೀಲ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಈಗ ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ನಡುವೆ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೊರ್ಟ್ನಿಂದ ಯಾವುದೇ ತೀರ್ಮಾನಗಳು ಬಂದರೂ ಇದನ್ನು ಆ ತೀರ್ಪಿಗೆ ಒಳಪಡಿಸಲಾಗುತ್ತದೆ ಎಂದು ಹೈಕೋರ್ಟ್ ಅರ್ಜಿದಾರರಿಗೆ ತಿಳಿಸಿದೆ.