ನವದೆಹಲಿ: ಕೋವಿಡ್19 ಹರಡುವ ಭೀತಿಯಿಂದ ಕೈಗೊಂಡಿರುವ ಲಾಕ್‌ಡೌನ್ ದೇಶ ವ್ಯಾಪಿ ಆರ್ಥಿಕ ಲಾಕೌಟ್ ಸೃಷ್ಟಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿರುವ ಅವರು, ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ-2005ರಡಿ ಈ ಬಿಕ್ಕಟ್ಟನ್ನು ಶಮನ ಮಾಡಲು ರಾಷ್ಟ್ರೀಯ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.
ಲಾಕ್‌ಡೌನ್ ಮುಂದುವರಿಕೆಯಿಂದ ದೇಶದ ಆರ್ಥಿಕತೆಯ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ. ಹೀಗಾಗಿ ಲಾಕ್‌ಡೌನ್ ನಿರ್ಧಾರದ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಅಂತಲೂ ಒತ್ತಾಯಿಸಿದ್ದಾರೆ.
ಎನ್‌ಡಿಎಂಎನ್ ಸೆಕ್ಷನ್ 6(2)(b) ಅಡಿಯಲ್ಲಿ ಯೋಜನೆ ರೂಪಿಸಿ ಅದಕ್ಕೆ ರಾಷ್ಟ್ರೀಯ ಪ್ರಾಧಿಕಾರ ಅನುಮೋದನೆ ನೀಡಬಹುದು. ಕೋವಿಡ್-19 ವಿರುದ್ಧದ ಹೋರಾಟಕ್ಕೆ ರಾಷ್ಟ್ರೀಯ ಯೋಜನೆ ರೂಪಿಸುವುದು ಕೇಂದ್ರ ಸರ್ಕಾರದ ಕೆಲಸವಾಗಿರುತ್ತದೆ. ಆದ್ರೆ ಈ ವಿಷಯದಲ್ಲಿ ಸರ್ಕಾರ ಮೌನವಹಿಸಿರುವುದು ಎದ್ದುಕಾಣುತ್ತಿದೆ ಅಂತ ದೂರಿದ್ದಾರೆ.
ಅಗತ್ಯ ಮೂಲ ಸೌಕರ್ಯ, ಮಾನವ, ಭೌತಿಕ ಹಾಗೂ ಆರ್ಥಿಕ ಸಂಪನ್ಮೂಲಗಳು ಇಲ್ಲದೇ ರಾಜ್ಯ ಸರ್ಕಾರಗಳು ಕೋವಿಡ್19 ವಿರುದ್ಧ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ಜವಾಬ್ದಾರಿ ಏನು ಎಂಬುದನ್ನು ಕೇಂದ್ರ ತಿಳಿಸಬೇಕು ಎಂದು ಹೇಳಿದ್ದಾರೆ.
ಎನ್‌ಡಿಎಂಎ ಕಾಯ್ದೆಯ ಸೆಕ್ಷನ್ 12 ರಡಿ ವಿಪತ್ತು ಎದುರಾಗಿರುವ ಪ್ರದೇಶದ ಜನರಿಗೆ ಕನಿಷ್ಠ ಪರಿಹಾರದ ಮಾನದಂಡಗಳ ಆಧಾರದಲ್ಲಿ ಅಗತ್ಯ ವಸ್ತುಗಳನ್ನು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲು ಬಯಸುತ್ತೇನೆ ಎಂದು ಹೇಳಿದ್ದಾರೆ.