ಕಟಿಹಾರ್ (ಬಿಹಾರ): ಸಾಮಾಜಿಕ ಅಂತರದ ಬಗ್ಗೆ ನಾವೆಲ್ಲ ಈಗ ಅರಿತುಕೊಳ್ಳುತ್ತಿದ್ದರೆ, ಬಿಹಾರದ ಹಳ್ಳಿಯೊಂದರಲ್ಲಿ ಕಳೆದ ನಾಲ್ಕು ವರ್ಷಗಳಿಂದ ಸಾಮಾಜಿಕ ಅಂತರದ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಕಟಿಹಾರ-ಪೂರ್ಣಿಯಾ ಗಡಿಯಲ್ಲಿರುವ ದಿವಾನಗಂಜ್ ಮಹಲದಾರ ಗ್ರಾಮದಲ್ಲಿ ಸಾಮಾಜಿಕ ಅಂತರದ ಪಾಲನೆ ಕಟ್ಟುನಿಟ್ಟಾಗಿ ನಡೆದುಕೊಂಡು ಬಂದಿದೆ.
2016ರಲ್ಲಿ ದಿವಾನಗಂಜ್ ಮಹಲದಾರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಡುಬು ಹಾಗೂ ಇತರ ಗಂಭೀರ ಸ್ವರೂಪದ ಚರ್ಮ ಕಾಯಿಲೆ ಹರಡಿದ್ದರಿಂದ ಮಕ್ಕಳು, ವೃದ್ಧರೆನ್ನದೆ ಹಲವಾರು ಜನ ಸಾವಿಗೀಡಾಗಿದ್ದರು. ಆ ಸಮಯದಲ್ಲಿ ಗ್ರಾಮಕ್ಕೆ ಬಂದಿದ್ದ ವಿಶ್ವ ಆರೋಗ್ಯ ಸಂಸ್ಥೆ ವೈದ್ಯರ ತಂಡ ಗ್ರಾಮದಲ್ಲಿ ಎಲ್ಲರೂ ಶುಚಿತ್ವ ಕಾಪಾಡಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚನೆ ನೀಡಿತ್ತು.
ಅಂದಿನಿಂದಲೇ ಗ್ರಾಮಸ್ಥರು ಸಾಮಾಜಿಕ ಅಂತರವನ್ನು ನಿತ್ಯ ಜೀವನದ ಭಾಗವಾಗಿಸಿಕೊಂಡರು. ಪ್ರಸ್ತುತ ಗ್ರಾಮದಲ್ಲಿ ಯಾವುದೇ ಸಾಂಕ್ರಾಮಿಕ ರೋಗದ ಭೀತಿ ಇಲ್ಲದಿದ್ದರೂ ಸಾಮಾಜಿಕ ಅಂತರದ ಜೀವನ ಶೈಲಿಯನ್ನು ಮಾತ್ರ ಇವರು ದೂರ ಮಾಡಿಲ್ಲ.
2016ರಲ್ಲಿ ಎದುರಾಗಿದ್ದ ಸಿಡುಬು ರೋಗದ ಕರಾಳ ದಿನಗಳನ್ನು ಗ್ರಾಮದ ಮುಖ್ಯಸ್ಥ ಪ್ರದೀಪ ಕುಮಾರ ಈಗಲೂ ನೆನಪಿಸಿಕೊಳ್ಳುತ್ತಾರೆ. 2016ರಲ್ಲಿ ಹರಡಿದ್ದ ಮಹಾಮಾರಿಯ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಂಡ ಇಲ್ಲಿಗೆ ಬಂದಿತ್ತು. ಗ್ರಾಮವು ರೋಗ ಮುಕ್ತವಾಗಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಂಸಾಹಾರವನ್ನು ತ್ಯಜಿಸುವಂತೆ ಅವರು ಹೇಳಿದ್ದರು. ಅಂದಿನಿಂದಲೂ ನಾವೆಲ್ಲ ಚಾಚೂ ತಪ್ಪದೇ ಸಾಮಾಜಿಕ ಅಂತರ ಪಾಲಿಸುತ್ತಿದ್ದೇವೆ ಎಂದು ಪ್ರದೀಪ ಕುಮಾರ ಹೇಳುತ್ತಾರೆ.
ವಿದೇಶದಿಂದ ಗ್ರಾಮಕ್ಕೆ ಮರಳಿದ್ದ ಯುವಕನೊಬ್ಬನಿಂದಲೇ ಸಿಡುಬು ರೋಗ ಹರಡಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ. ಆಗ ಸುಮಾರು 350 ಜನ ರೋಗಕ್ಕೆ ಬಲಿಯಾಗಿದ್ದರು. ಬಿಹಾರ ವಿಧಾನಸಭೆಯಲ್ಲೂ ಈ ಘಟನೆ ಪ್ರಸ್ತಾಪವಾದ ನಂತರ ವಿಶ್ವ ಆರೋಗ್ಯ ಸಂಸ್ಥೆ ತಂಡ ಗ್ರಾಮಕ್ಕೆ ಬಂದಿತ್ತು ಎಂದು ಗ್ರಾಮಸ್ಥರು ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾರೆ.