ನವದೆಹಲಿ: 20 ಭಾರತೀಯ ಯೋಧರು ಹುತಾತ್ಮರಾಗಲು ಕಾರಣವಾಗಿರುವ ಚೀನಾ ವಿರುದ್ಧ ದೇಶಾದ್ಯಂತ ಆಕ್ರೋಶ ತೀವ್ರಗೊಳ್ಳುತ್ತಿದೆ. ರಾಜಧಾನಿ ದೆಹಲಿಯಲ್ಲಿ ನೆಲೆಸಿರುವ ಈಶಾನ್ಯ ಭಾಗದ ಜನರು ಇಂದು ಪ್ರತಿಭಟನೆ ನಡೆಸಿದರು.
ದೆಹಲಿಯ ತೀನ್ ಮೂರ್ತಿ ಮಾರ್ಗ್ ಸಮೀಪದಲ್ಲಿರುವ ಚೀನಾ ರಾಯಭಾರ ಕಚೇರಿ ಎದುರು ಸೇರಿದ ಅವರು ಶಾಂತಿಯುತ ಪ್ರತಿಭಟನೆ ನಡೆಸಿ ಕ್ಸಿ ಜಿಂಗ್ ಪಿಂಗ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶ, ನಮ್ಮ ಭೂಮಿ, ಚೀನಾದವರೇ ತೊಲಗಿ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಇದೇ ವೇಳೆ ಪಿಎಲ್‌ಎ ಡೌನ್ ಡೌನ್ ಎಂಬ ಘೋಷಣೆಗಳನ್ನು ಕೂಗಿ ಚೀನಾ ವಸ್ತುಗಳನ್ನು ನಿಷೇಧಿಸುವಂತೆ ಒತ್ತಾಯಿಸಿದರು.
ಜೂನ್ 15 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಭಾರತ-ಚೀನಾ ಸೇನೆಗಳ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಜಗತ್ತಿನ ಹಲವು ದೇಶಗಳು ಚೀನಾ ನಡೆಯನ್ನು ತೀವ್ರವಾಗಿ ಖಂಡಿಸಿವೆ.