ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ರದ್ದು ಮಾಡಿದೆ. ಇದೀಗ ಈ ವಿಚಾರ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಭಾರತದೊಂದಿಗಿನ ಎಲ್ಲ ರೀತಿಯ ದ್ವಿಪಕ್ಷೀಯ ಸಂಬಂಧ ಹಾಗೂ ವ್ಯವಹಾರ ಸ್ಥಗಿತಗೊಳಿಸಲೂ ಅದು ನಿರ್ಧರಿಸಿದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸುರಕ್ಷಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಭಾರತದಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇದರ ಜತೆಗೆ ಇದೇ ತಿಂಗಳು ತನ್ನ ಹೈಕಮಿಷನರ್ ಅವರನ್ನ ಭಾರತಕ್ಕೆ ಕಳುಹಿಸದಿರಲು ನಿರ್ಧರಿಸಿದೆ.
ವಿಶೇಷವಾಗಿ ಮೂರು ನಿರ್ಧಾರ ತೆಗೆದುಕೊಂಡಿರುವ ಪಾಕ್ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಕೆಳಕ್ಕಿಳಿಸುವುದು, ದ್ವಿಪಕ್ಷೀಯ ವ್ಯಾಪಾರ ಸ್ಥಗಿತಗೊಳಿಸುವುದು ಹಾಗೂ ದ್ವಿಪಕ್ಷೀಯ ವ್ಯವಸ್ಥೆ ಬಗ್ಗೆ ಪರಾಮರ್ಶೆ ನಡೆಸುವುದು.ಇನ್ನು ಪಾಕ್ನಲ್ಲಿದ್ದ ಭಾರತೀಯ ರಾಯಭಾರಿಯನ್ನ ಹೊರಹಾಕಿ ಆದೇಶ ಹೊರಡಿಸಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಗೂ ಮೊದಲು ಭಾರತ-ಪಾಕ್ ನಡುವೆ 2018ರ ಜುಲೈನಿಂದ 2019ರ ಜನವರಿ ವರೆಗೆ 6,230 ಕೋಟಿ ವ್ಯವಹಾರ ನಡೆದಿತ್ತು. ಇದಕ್ಕೂ ಮೊದಲು 2017-18ರಲ್ಲಿ ಉಭಯ ದೇಶಗಳ ನಡುವೆ 1,600ಕೋಟಿ ರೂ ವ್ಯವಹಾರ ನಡೆದಿತ್ತು.
ಎರಡೂ ರಾಷ್ಟಗಳ ನಡುವೆ 2016- 17 ರಲ್ಲಿ 15ಸಾವಿರ ಕೋಟಿ ರೂ. ವ್ಯವಹಾರ ನಡೆದರೆ, 2017- 18 ರಲ್ಲಿ 16,400 ಕೋಟಿ ಹಾಗೂ 2018-19ರಲ್ಲಿ 18 ಸಾವಿರ ಕೋಟಿ ರೂ. ವ್ಯವಹಾರ ನಡೆದಿತ್ತು. ಇದೀಗ ಈ ವ್ಯವಹಾರಕ್ಕೆ ಅಂತಿಮ ತೆರೆ ಎಳೆಯಲು ಪಾಕಿಸ್ತಾನ ಮುಂದಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಕಿಸ್ತಾನ ವಿಪಕ್ಷ ಮುಖ್ಯಸ್ಥ ಹಾಗೂ ಮುಸ್ಲಿಂ ಲೀಗ್ ಮುಖಂಡ ಶಹಬಾಜ್ ಶರೀಫ್, ಇದೀಗ ಭಾರತಕ್ಕೆ ಪ್ರತ್ಯುತ್ತರ ನೀಡುವ ಸಮಯ ಬಂದಿದೆ ಎಂದಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರ ವಿಚಾರವಾಗಿ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧವಾಗಿ ವಿಶ್ವಸಂಸ್ಥೆ ಮೆಟ್ಟಿಲೇರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.