ಚೀನಾದಲ್ಲಿ ದಿನೇ ದಿನೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇರುವ ಹಿನ್ನೆಲೆ ಪಾಕಿಸ್ತಾನವು ಮತ್ತೆ ಮಾರ್ಚ್ 15 ರವರೆಗೆ ಚೀನಾಕ್ಕೆ ವಿಮಾನಗಳನ್ನು ಸ್ಥಗಿತಗೊಳಿಸಿದೆ.
ಈ ಮೊದಲು, ವಿಶ್ವ ಆರೋಗ್ಯ ಸಂಸ್ಥೆ ಚೀನಾದಲ್ಲಿನ ಕೊರೊನಾ ವೈರಸ್ ಹಾವಳಿಯನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು. ಘೋಷಣೆ ಒಂದು ದಿನದ ನಂತರ ಅಂದರೆ, ಜನವರಿ 31 ರಂದು ಫೆಬ್ರವರಿ 2 ರವರೆಗೆ ಚೀನಾದಿಂದ ವಿಮಾನಗಳನ್ನು ಪಾಕಿಸ್ತಾನ ಸ್ಥಗಿತಗೊಳಿಸಿತ್ತು. ಅನಂತರ ಫೆಬ್ರವರಿ 3 ರಿಂದ ಮತ್ತೆ ವಾಯು ಸೇವೆಗಳನ್ನು ಪುನಾರಂಭಿಸಿ ವಾರಕ್ಕೆ ಎರಡು ವಿಮಾನಗಳನ್ನು ಬೀಜಿಂಗ್‌ಗೆ ಕಳಿಸುತ್ತಿತ್ತು. ಆದರೆ, ಕಾರ್ಯಾಚರಣೆಯನ್ನು ಪುನರಾರಂಭಿಸಿದ ಕೆಲವೇ ದಿನಗಳಲ್ಲಿ ಮತ್ತೆ ಚೀನಾಕ್ಕೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್, ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಾರ್ಚ್ 15 ರವರೆಗೆ ವಿಮಾನಯಾನವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಬೀಜಿಂಗ್‌ಗೆ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯ ಚೀನಾದಲ್ಲಿ ಕೊರೊನಾ ವೈರಸ್ ನಿಂದಾಗಿ ಸಾವಿನ ಸಂಖ್ಯೆ 2,592 ಕ್ಕೆ ಏರಿದ್ದು, 77,000 ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.