ಶ್ರೀನಗರ: ಪಾಕಿಸ್ತಾನ ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮಂಕೋಟ್ ಸೆಕ್ಟರ್‌ನಲ್ಲಿ ಗುಂಡಿನ ದಾಳಿ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ದೇವೇಂದರ್ ಆನಂದ್ ಅವರು, ಭಾನುವಾರ ಬೆಳಿಗ್ಗೆ 6.45ರ ಸುಮಾರಿಗೆ, ಪೂಂಚ್ ಜಿಲ್ಲೆಯ ಮಂಕೋಟ್ ಸೆಕ್ಟರ್‌ನಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನವು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದಿದ್ದಾರೆ.
ಪಾಕ್ ಪುಂಡಾಟಕ್ಕೆ ಭಾರತೀಯ ಸೇನೆಯು ಪ್ರತೀಕಾರ ತೀರಿಸುತ್ತಿದೆ. ಇದಕ್ಕೂ ಮುನ್ನ ಆಗಸ್ಟ್ 6ರಂದು ಪಾಕಿಸ್ತಾನ ಸೇನೆಯು ನಿಯಂತ್ರಣ ರೇಖೆ ಬಳಿಯ ಮಾಂಧರ್ ಸೆಕ್ಟರ್‌ನಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿತ್ತು. ಆಗಸ್ಟ್ 5ರಂದು ಕೂಡ ಪಾಕಿಸ್ತಾನ ಪಡೆಗಳು ಸಂಜೆ 7 ಗಂಟೆ ಸುಮಾರಿಗೆ ಗುಂಡು ಹಾರಿಸಲು ಪ್ರಾರಂಭಿಸಿದವು ಮತ್ತು ಪೂಂಚ್ ಜಿಲ್ಲೆಯ ಮಂಕೋಟ್ ಸೆಕ್ಟರ್‌ನಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಗುಂಡಿನ ದಾಳಿ ನಡೆಸಲಾಗಿತ್ತು.
ಪ್ರವಾಹದಿಂದಾಗಿ ಮಂಕೋಟ್ ಸೆಕ್ಟರ್‌ನ ಅನೇಕ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಈ ವರ್ಷದ ಆರಂಭದಿಂದಲೂ ಪಾಕಿಸ್ತಾನವು 2,720ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, 21 ನಾಗರಿಕರು ಸಾವನ್ನಪ್ಪಿದ್ರೆ, 94 ಮಂದಿ ಗಾಯಗೊಂಡಿದ್ದಾರೆ.