ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ 'ಪದ್ಮವಿಭೂಷಣ', 'ಪದ್ಮಭೂಷಣ' ಹಾಗೂ 'ಪದ್ಮಶ್ರೀ' ಪ್ರಶಸ್ತಿಗಾಗಿ ಅರ್ಜಿ ಸಲ್ಲಿಕೆ ಮಾಡಲು ಸೆಪ್ಟೆಂಬರ್ 15ರವರೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ.
2021ರ ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಂದರ್ಭದಲ್ಲಿ ಈ ಪ್ರಶಸ್ತಿ ಘೋಷಣೆ ಮಾಡಲಾಗುತ್ತದೆ. ಅದಕ್ಕಾಗಿ ಆನ್ಲೈನ್ ನಾಮನಿರ್ದೇಶನ ಹಾಗೂ ಶಿಫಾರಸು ಮಾಡಲು ಮೇ 1ರಿಂದ ಪ್ರಕ್ರಿಯೆ ಆರಂಭಗೊಂಡಿದ್ದು, ಇದೀಗ ಕೊನೆಯ ದಿನಾಂಕ ಸೆಪ್ಟೆಂಬರ್ 15, 2020 ಆಗಿದೆ.
ಅರ್ಜಿ ಸಲ್ಲಿಕೆ ಮಾಡಲು https://padmaawards.gov.in ವೆಬ್ಸೈಟ್ ಬಳಕೆ ಮಾಡಬಹುದಾಗಿದ್ದು, ಈಗಾಗಲೇ 8,035 ಹೆಸರುಗಳ ನೋಂದಣಿ ನಡೆದಿದೆ. ಇದರಲ್ಲಿ 6,361 ಮಂದಿಯ ಶಿಫಾರಸು ಪ್ರಕ್ರಿಯೆ ಪೂರ್ಣಗೊಂಡಿವೆ.
1954ರಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ ಪ್ರಶಸ್ತಿ ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಣೆಯಾಗುತ್ತದೆ. ವಿಭಿನ್ನ ಕಾರ್ಯದ ಮೂಲಕ ಗುರುತಿಸಿಕೊಳ್ಳುವವರಿಗೆ ಈ ಅವಾರ್ಡ್ ಸಲ್ಲುತ್ತದೆ. ಪ್ರಮುಖವಾಗಿ ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ಸಾಮಾಜಿಕ ಕಾರ್ಯ, ವಿಜ್ಞಾನ, ಸೇವೆ, ವ್ಯಾಪಾರ ಮತ್ತು ಕೈಗಾರಿಕೆ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದು ವಾಡಿಕೆ.