ಮುಂಬೈ: ವಿವಿಧ ಟೆಲಿಕಾಂ ಕಂಪನಿಗಳೊಂದಿಗೆ ದರ ಸಮರದಲ್ಲಿ ಹಿಂದೆ ಬಿದ್ದು ಅಪಾರ ನಷ್ಟಕ್ಕೊಳಗಾಗಿರುವ ಭಾರತೀಯ ಸಂಚಾರಿ ನಿಗಮ (ಬಿಎಸ್‌ಎನ್‌ಎಲ್) ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಪಡೆದುಕೊಳ್ಳುವಂತೆ (ವಿಆರ್‌ಎಸ್) ಸೂಚಿಸಿದೆ.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಿಎಸ್‌ಎನ್‌ಎಲ್ ಒಂದೇ ವಾರದಲ್ಲಿ 70 ಸಾವಿರ ಸಿಬ್ಬಂದಿ ಈ ಯೋಜನೆ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಬಿಎಸ್ಎನ್ಎಲ್ನಲ್ಲಿ ಖಾಯಂಗೊಂಡಿರುವ ಸಿಬ್ಬಂದಿಯ ಸಂಬಳ ಒಂದು ತಿಂಗಳ ತಡವಾದರೆ, ಒಪ್ಪಂದದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಕಳೆದ 8 ತಿಂಗಳಿಂದ ಯಾವುದೇ ರೀತಿಯ ಸಂಬಳ ನೀಡಿಲ್ಲ. ಹೀಗಾಗಿ ಒಟ್ಟು 70 ಸಾವಿರ ಕೆಲಸಗಾರರು ಸ್ವಯಂ ನಿವೃತ್ತಿ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ಮಹತ್ವದ ವಿಷಯ ಹೊರಬಿದ್ದಿದೆ. ಬಿಎಸ್‌ಎನ್‌ಎಲ್ ಒಟ್ಟಾರೆಯಾಗಿ 77 ಸಾವಿರ ಉದ್ಯೋಗಿಗಳಿಂದ VRS ಪಡೆಯಬೇಕೆಂದು ಗುರಿ ಹಾಕಿಕೊಂಡಿತ್ತು. ಇದರಿಂದ ಬಿಎಸ್ಎನ್ಎಲ್ಗೆ ವರ್ಷಕ್ಕೆ ಏಳು ಸಾವಿರ ಕೋಟಿ ಉಳಿತಾಯದ ಯೋಜನೆ ಇದಾಗಿದೆ.
ಈಗಾಗಲೇ ನಷ್ಟದಲ್ಲಿರುವ ಬಿಎಸ್‌ಎನ್‌ಎಲ್ ನೌಕರರ ವೇತನವನ್ನೂ ಸರಿಯಾಗಿ ನೀಡಲು ಸರ್ಕಾರದ ಕೈಯಲ್ಲಿ ಆಗುತ್ತಿಲ್ಲ. ಹೀಗಾಗಿ 70 ಸಾವಿರ ಸಿಬ್ಬಂದಿಗಳು ಸ್ವಯಂ ನಿವೃತ್ತಿ(ವಿಆರ್ ಎಸ್) ಪಡೆಯಲು ಮುಂದಾಗಿದ್ದಾರೆ. 50 ವರ್ಷ ವಯಸ್ಸು ದಾಟಿದ ನೌಕರರು ವಿಆರ್‌ಎಸ್‌ಗೆ ಅರ್ಹರು ಎಂದು ಬಿಎಸ್‌ಎನ್‌ಎಲ್ ವಿಆರ್‌ಎಸ್ ಯೋಜನೆ- 2019 ಯಲ್ಲಿ ಹೇಳಿದೆ.
ಲಾಭದಾಯಕ ಸಂಸ್ಥೆ ಆಗಿಸಲು ಕೇಂದ್ರದ ಪ್ಲಾನ್ ಏನು?
ಡಿಒಟಿ ಬಿಎಸ್‌ಎನ್‌ಎಲ್ ಪುನರುಜ್ಜೀವನ ಯೋಜನೆಗೆ 76,000 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಇದೇ ಸಾಲಿನಲ್ಲಿ ವಿಂಗಡನೆ ಮಾಡಿದರೆ ಕಂಪನಿಯ ವೆಚ್ಚ 95,000 ಕೋಟಿ ರೂ.ಗಿಂತ ಕಡಿಮೆ ಆಗಲಿದೆ. ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಅಡಿಯಲ್ಲಿ ಬಿಎಸ್ಎನ್ಎಲ್ನ 1.76 ಲಕ್ಷ ಉದ್ಯೋಗಿಗಳಿಗೆ ₹ 29,000 ಕೋಟಿ, 4ಜಿ ಸ್ಪೆಕ್ಟ್ರಮ್ಗೆ ₹ 20,000 ಕೋಟಿ ಹಾಗೂ ₹13,000 ಕೋಟಿ, 4ಜಿ ಸೇವೆಗಳ ಕ್ಯಾಪೆಕ್ಸ್ಗೆ ಹಣ ಒದಗಿಸಬೇಕಾಗುತ್ತದೆ. ಈ ಪ್ಯಾಕೇಜ್ ಬಂದರೇ 2024ರ ಆರ್ಥಿಕ ವರ್ಷದ ವೇಳೆಗೆ ಬಿಎಸ್‌ಎನ್‌ಎಲ್ ಲಾಭದಾಯಕ ಹಾದಿಗೆ ಮರಳಬಹುದು ಎಂದು ಅಂದಾಜಿಸಲಾಗಿದೆ.
ವಿಆರ್‌ಎಸ್ ಕೊಡಲು ಕೇಂದ್ರ ನಿರ್ಧರಿಸಿದ್ದೇಕೆ?
ಕಳೆದ ಅಕ್ಟೋಬರ್ 23ರಂದು ಕೇಂದ್ರ ಟೆಲಿಕಾಂ ಇಂಡಸ್ಟ್ರಿ ಸಚಿವ ರವಿಶಂಕರ್ ಪ್ರಸಾದ್, ಸುದ್ದಿಗೋಷ್ಠಿ ನಡೆಸಿ ಈ ವಿಷಯ ಹೊರಹಾಕಿದ್ದರು. ಇದೀಗ ಸುಮಾರು 70 ಸಾವಿರ ಸಿಬ್ಬಂದಿ ವಿಆರ್‌ಎಸ್‌ಗೆ ಅರ್ಜಿ ಹಾಕಿದ್ದಾರೆ ಎಂದು ಬಿಎಸ್‌ಎನ್‌ಎಲ್ ಎಂಡಿ ಪಿಕೆ ಪುರವರ್ ತಿಳಿಸಿದ್ದಾರೆ. 1.76 ಲಕ್ಷ ನೌಕರರು ಬಿಎಸ್ಎನ್ಎಲ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದರಲ್ಲಿ 1 ಲಕ್ಷಕ್ಕೂ ಅಧಿಕ ಸಿಬ್ಬಂದಿ 50+ ವಯಸ್ಸಿನವರು ಇದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದರು.
ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್ಎಲ್ ಸಂಸ್ಥೆ ಉದ್ಯೋಗಿಗಳಿಗೆ ನವೆಂಬರ್ 4ರಿಂದಲೇ ಸ್ವಯಂ ನಿವೃತ್ತಿ ಪಡೆದುಕೊಳ್ಳುವ ಅವಕಾಶ ನೀಡಲಾಗಿದ್ದು, ಡಿಸೆಂಬರ್ 3ರೊಳಗೆ ಇದಕ್ಕೆ ಅರ್ಜಿ ಸಲ್ಲಿಕೆ ಮಾಡುವಂತೆ ತಿಳಿಸಲಾಗಿತ್ತು.
ಎಲ್ಲರಿಗೂ ಅಭಯ ನೀಡಿದ್ದ ಇಲಾಖೆ:
ಇದೇ ವೇಳೆ, ಹಣಕಾಸು ಸಚಿವರು ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಮುಚ್ಚುವ ಬಗ್ಗೆ ಯಾವುದೇ ಆಸಕ್ತಿ ಹೊಂದಿಲ್ಲ. ಎಂಟಿಎನ್ಎಲ್ ಮತ್ತು ಬಿಎಸ್‌ಎನ್‌ಎಲ್ ಮುಚ್ಚಲಾಗುತ್ತಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾದಂತಹವು ಎಂದು ಡಿಒಟಿ ಕಾರ್ಯದರ್ಶಿ ಅನ್ಶು ಪ್ರಕಾಶ್ ಸಹ ಸ್ಪಷ್ಟ ಪಡಿಸಿದ್ದರು. ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಬಿಎಸ್‌ಎನ್‌ಎಲ್ ಮುಚ್ಚಲಾಗುತ್ತಿದೆ ಎಂಬ ವರದಿಗಳಿಗೆ ಡಿಒಟಿ ಪೂರ್ಣ ವಿರಾಮ ಇಟ್ಟಿದೆ. ಇದರಿಂದ ಬಿಎಸ್ಎನ್ಎಲ್ನ 1.76 ಲಕ್ಷ ಉದ್ಯೋಗಿಗಳು ನಿರಾಳರಾಗಿದ್ದರು. ಈ ನಡುವೆ ಈಗ 70 ಸಾವಿರ ಉದ್ಯೋಗಿಗಳು ವಿಆರ್‌ಎಸ್ ಪಡೆಯಲು ಸನ್ನದ್ಧರಾಗಿರುವುದು ಸಂಸ್ಥೆಯ ಮರು ಚೇತನಕ್ಕೆ ಅನುವು ಮಾಡಿಕೊಟ್ಟಂತಾಗಿದೆ.