ಕಟಕ್: ಒಡಿಶಾದ ಕಟಕ್‌ನ ಕ್ಯಾನ್ಸರ್ ಆಸ್ಪತ್ರೆಯೊಂದರಲ್ಲಿ ಕಳೆದ 10 ದಿನಗಳಲ್ಲಿ ಸುಮಾರು 100 ರೋಗಿಗಳು, ಆಸ್ಪತ್ರೆಗೆ ಭೇಟಿ ನೀಡಿದವರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.
ಕೋವಿಡ್ ಪ್ರಕರಣಗಳು ವರದಿಯಾದ ಬಳಿಕ ಆಚಾರ್ಯ ಹರಿಹರ್ ಪ್ರಾದೇಶಿಕ ಕ್ಯಾನ್ಸರ್ ಸಂಶೋಧನಾ ಕೇಂದ್ರವನ್ನು ಸ್ಯಾನಿಟೈಸ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬ ಕ್ಯಾನ್ಸರ್ ರೋಗಿಯಿಂದ ಎಲ್ಲಾ ರೋಗಿಗಳಿಗೆ ಏಕಾಏಕಿ ಹೀಗೆ ಸೋಂಕು ತಗುಲಲು ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಟಕ್ ಜಿಲ್ಲಾಧಿಕಾರಿ ಭವಾನಿ ಶಂಕರ್ ಚೈನಿ ಆರೋಪಿಸಿದ್ದಾರೆ. ಹಾಗೆಯೇ ಈ ಕುರಿತು ಸೂಕ್ತ ತನಿಖೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಟಕ್ ನಗರದಲ್ಲಿ ಒಟ್ಟು 190 ಕೊರೊನಾ ಕೇಸ್ಗಳು ವರದಿಯಾಗಿದ್ದು, ಈ ಪೈಕಿ 144 ಸೋಂಕಿತರು ಕಳೆದ ಮೂರು ದಿನಗಳಲ್ಲಿ ಪತ್ತೆಯಾಗಿದ್ದಾರೆ. ಇವರಲ್ಲಿ 100 ಮಂದಿ ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳೇ ಆಗಿದ್ದಾರೆಂಬುದನ್ನು ಗಮನಿಸಬೇಕಿದೆ.
ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚಲು ಕಟಕ್ ನಗರವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.