ನವದೆಹಲಿ : ರಾಜ್ಯಸಭೆ ಕಲಾಪ ಬಹಿಷ್ಕರಿಸಿದ್ದ ವಿರೋಧ ಪಕ್ಷದ ಸದಸ್ಯರು ಇದೀಗ ವ್ಯವಹಾರ ಸಲಹಾ ಸಮಿತಿ(ಬಿಎಸಿ)ಯನ್ನು ಬಹಿಷ್ಕರಿಸಿದ್ದಾರೆ. ರಾಜ್ಯಸಭೆ ಉಪ ಸಭಾಪತಿ ಹರಿವಂಶ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಬಿಎಸಿ ಸಭೆ ನಡೆಯಿತು.
ಡೇರೆಕ್ ಒಬ್ರಿಯನ್, ರಾಮ್ ಗೋಪಾಲ್ ಯಾದವ್, ಆನಂದ್ ಶರ್ಮಾ, ಜೈರಾಮ್ ರಮೇಶ್ ಮತ್ತು ಮನೋಜ್ ಕುಮಾರ್ ಝಾ ಸೇರಿ ಐದು ವಿರೋಧ ಪಕ್ಷಗಳು ವ್ಯವಹಾರಗಳ ಸಲಹಾ ಸಮಿತಿ ಸಭೆ ಬಹಿಷ್ಕರಿಸಿರುವುದಾಗಿ ತೃಣಮೂಲ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ತಾವರ್ ಚಂದ್ ಗೆಹ್ಲೋಟ್, ಬಿಜೆಪಿ ಸಂಸದರಾದ ಭೂಪೇಂದ್ರ ಯಾದವ್, ಭುಬನೇಶ್ವರ್ ಕಲಿಟ ಮತ್ತು ಶಿವ ಪ್ರತಾಪ್ ಶುಕ್ಲಾ, ಜೆಡಿಯುನ ಆರ್‌ಸಿಪಿ ಸಿಂಗ್ ಮತ್ತು ಬಿಜು ಜನತಾ ದಳದ ಪ್ರಸನ್ನ ಆಚಾರ್ಯ ಸಭೆಯಲ್ಲಿದ್ದರು.
ನಿಗದಿಯಂತೆ ರಾಜ್ಯಸಭೆ ಕಲಾಪ ನಾಳೆಯೂ ನಡೆಯಲಿದೆ ಎಂದು ಆಡಳಿತ ಪಕ್ಷದ ನಾಯಕರು ತಿಳಿಸಿದ್ದಾರೆ. ನವೆಂಬರ್‌ನಲ್ಲಿ ಸದಸ್ಯತ್ವ ಮುಗಿಯಲಿರುವ ಸದಸ್ಯರಿಗಾಗಿ ನಾಳಿನ ಕಲಾಪದಲ್ಲಿ 1 ಗಂಟೆ ನಿಗದಿ ಪಡಿಸಲಾಗಿದೆ ಎಂದು ಹೇಳಿದ್ದಾರೆ.