ETV Bharat / bharat

ಬಜೆಟ್‌ನಲ್ಲಿ ಪ್ರಧಾನಮಂತ್ರಿ ಮೋದಿ ಅವರ ರಾಜಕೀಯ ಉದ್ದೇಶಗಳ ಪ್ರತಿಫಲನ? - narendra modi

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ೨೦೨೦-೨೧ರ ಬಜೆಟ್‌ನಲ್ಲಿ ಆರ್ಥಿಕ ಹುರಿದುಂಬಿಸುವಿಕೆಯ ಯಾವ ಕ್ರಮಗಳಿಗೂ ಮುಂದಾಗದ್ದರ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜಕೀಯ ಉದ್ದೇಶಗಳಿವೆ. ಸುಧಾರಣಾ ಪರ ನಿಲುವನ್ನು ಪ್ರಧಾನಿಯುವರು ಈಗಲೇ ತೋರಬೇಕು, ಇಲ್ಲದಿದ್ದರೆ ಎಂದಿಗೂ ಸಾಧ್ಯವಾಗದು ಎಂಬ ಪರಿಸ್ಥಿತಿಯಲ್ಲಿಯೂ ದೊಡ್ಡ ಮಟ್ಟದ ಸುಧಾರಣಾ ಕ್ರಮಗಳಿಗೆ ಅಥವಾ “ಕನಸಿನ ಬಜೆಟ್‌” ಮಂಡಿಸುವ ಆಸೆಗೂ ಸಚಿವೆ ಮುಂದಾಗಿಲ್ಲ. ಹೀಗಾಗಿ ದೀರ್ಘ ಅವಧಿಯ ಬಂಡವಾಳ ಗಳಿಕೆ ತೆರಿಗೆ ರದ್ದತಿಯಂತಹ ಯಾವುದೇ ಬೃಹತ್‌ ಸಂವೇದನಾ ಭರವಸೆಗಳಿಲ್ಲದ ಬಜೆಟ್‌ ಪ್ರಸ್ತುತಿಯಿಂದಾಗಿ ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ನಿರಾಶೆ ಪ್ರದರ್ಶಿಸಿದೆ.

Budget
ಬಜೆಟ್‌ನಲ್ಲಿ ಪ್ರಧಾನಮಂತ್ರಿ ಮೋದಿ ಅವರ ರಾಜಕೀಯ ಉದ್ದೇಶಗಳ ಪ್ರತಿಫಲನ?
author img

By

Published : Feb 2, 2020, 11:37 PM IST

ಆದರೆ, ಮೋದಿ ಅವರನ್ನು ಬಲ್ಲವರು ಹೇಳುವ ಮಾತೇ ಬೇರೆ. ನರಸಿಂಹರಾವ್‌ ಅವರು ೧೯೯೧ರಲ್ಲಿ ಮಾಡಿದಂತಹ ಕ್ರಮಗಳಿಗಿಂತ ನೇರವಾದ ಸುಧಾರಣಾ ಕ್ರಮಗಳನ್ನು ಅವರು ಬಯಸುತ್ತಾರೆ ಎನ್ನುತ್ತಾರೆ ಅವರು. ಆದಾಯ ತೆರಿಗೆಯಿಂದ ಮುಕ್ತರಾಗಲು ಬಯಸಿದವರಿಗಾಗಿ ಮಿತಿಯನ್ನು ತಗ್ಗಿಸುವ ಮೂಲಕ ಅಂದಾಜು ರೂ.೪೦,೦೦೦ ಕೋಟಿಯಷ್ಟಿರುವ ವಿತ್ತೀಯ ಕೊರತೆಯನ್ನು ಎದುರಿಸುವ ಇಚ್ಛಾಶಕ್ತಿಯನ್ನು ಅವರ ಸರಕಾರ ಪ್ರದರ್ಶಿಸಿದೆ. ಅಲ್ಲದೇ, ದೇಶದ ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ರಾಜಸ್ವ ಸಂಪತ್ತು ನಿಧಿ ಹೂಡಿಕೆ ಮೇಲೆ ವಿಧಿಸಲಾಗುವ ತೆರಿಗೆಗಳಿಗೆ ಶೇ. ೧೦೦ರಷ್ಟು ವಿನಾಯತಿ ನೀಡುವ ಪ್ರಸ್ತಾಪವನ್ನೂ ಸರಕಾರ ಮಾಡಿದೆ. ಈ ವಿನಾಯಿತಿಗಳಲ್ಲದೇ, ಲಾಭಾಂಶ ಹಂಚಿಕೆ ತೆರಿಗೆಯನ್ನು (ಡಿವಿಡೆಂಡ್‌ ಡಿಸ್ಟ್ರಿಬ್ಯೂಶನ್‌ ಟ್ಯಾಕ್ಸ್‌ – ಡಿಡಿಟಿ) ರದ್ದುಗೊಳಿಸುವ ಮೂಲಕ ಮೋದಿ ಸರಕಾರ ಮತ್ತೆ ರೂ.೨೨,೦೦೦ ಕಳೆದುಕೊಳ್ಳಲು ಮುಂದಾಗಿದೆ. ಆ ಮೂಲಕ ಲಾಭಾಂಶ ಬಯಸುವ ವಿದೇಶಿ ಅಥವಾ ರಾಜಸ್ವ ಹೂಡಿಕೆದಾರರನ್ನು ಮೂಲಸೌಕರ್ಯ ಕ್ಷೇತ್ರಗಳತ್ತ ಆಕರ್ಷಿಸುವ ಪ್ರಯತ್ನಗಳನ್ನು ಮಾಡಿದೆ. ಇಂತಹ ಕ್ರಮಗಳಿಂದಾಗಿ ಜಾಗತಿಕ ಗುಣಮಟ್ಟದ ಮೂಲಸೌಕರ್ಯ ನಿರ್ಮಾಣಕ್ಕೆ ಮುಂದಿನ ನಾಲ್ಕು ವರ್ಷಗಳಿಗೆ ಅಂದಾಜಿಸಿರುವ ರೂ.೭೧.೪೯ ಲಕ್ಷ ಕೋಟಿಯಷ್ಟು ಬೃಹತ್‌ ಪ್ರಮಾಣದ ಬಂಡವಾಳವನ್ನು ಪಡೆಯುವ ಭರವಸೆಯನ್ನು ಸರಕಾರ ವ್ಯಕ್ತಪಡಿಸಿದೆ.

“ವಿವಾದದಿಂದ ವಿಶ್ವಾಸದತ್ತ” ಯೋಜನೆಯನ್ನು ಪರಿಚಯಿಸುವ ಮೂಲಕ ತೆರಿಗೆ ಕ್ಷಮಾದಾನದಂತಹ ಪ್ರಸ್ತಾಪವನ್ನು ಪ್ರಸಕ್ತ ಬಜೆಟ್‌ನಲ್ಲಿ ಮಾಡಲಾಗಿದೆ. ಇದರಿಂದಾಗಿ, ದಂಡ ಮತ್ತು ಬಡ್ಡಿಯನ್ನು ಕೈಬಿಡುವ ಮೂಲಕ ನೇರ ತೆರಿಗೆಗೆ ಸಂಬಂಧಿಸಿದ ೪,೯೯,೦೦೦ ವ್ಯಾಜ್ಯಗಳ ಪ್ರಮಾಣವನ್ನು ಇಳಿಸುವ ಪ್ರಯತ್ನ ಮಾಡಲಾಗಿದೆ.

ಆದರೆ, ಆದಾಯ ತೆರಿಗೆ ಕಾನೂನನ್ನು ಸರಳಗೊಳಿಸುವ ಮೂಲಕ ಬಜೆಟ್‌ನ ಸುದ್ದಿ ಶೀರ್ಷಿಕೆಗಳು ವೈಯಕ್ತಿಕ ಆದಾಯ ತೆರಿಗೆದಾರರಿಗೆ ನೆಮ್ಮದಿ ತಂದಿವೆ. ಹೊಸ ಮತ್ತು ಸರಳೀಕೃತ ವೈಯಕ್ತಿಕ ಆದಾಯ ತೆರಿಗೆ ಆಳ್ವಿಕೆಯ ಪ್ರಸ್ತಾಪದ ಮೂಲಕ ಕೆಲವು ವಿನಾಯತಿಗಳು ಹಾಗೂ ಕಡಿತಗಳು ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಸಿಗಲಿದ್ದು, ಇದರಿಂದ ವೈಯಕ್ತಿಕ ಆದಾಯ ತೆರಿಗೆ ದರಗಳು ಗಣನೀಯವಾಗಿ ತಗ್ಗಲಿವೆ.

ಸದ್ಯ ಇರುವ ವಿವಿಧ ರೀತಿಯ ೭೦ ವಿನಾಯಿತಿಗಳು ಮತ್ತು ಕಡಿತಗಳನ್ನು (೧೦೦ಕ್ಕೂ ಹೆಚ್ಚು) ಕಿತ್ತು ಹಾಕುವ ಪ್ರಸ್ತಾಪವನ್ನು ಪ್ರಸಕ್ತ ಬಜೆಟ್‌ನಲ್ಲಿ ಮಾಡಲಾಗಿದೆ. ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಮತ್ತು ತೆರಿಗೆ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಬಾಕಿ ಉಳಿಯುವ ವಿನಾಯಿತಿಗಳು ಮತ್ತು ಕಡಿತಗಳನ್ನು ಬರಲಿರುವ ವರ್ಷಗಳಲ್ಲಿ ವಿವೇಚನೆಯಿಂದ ಪರಿಷ್ಕರಿಸಲಾಗುವುದು.

ಪ್ರಾಮಾಣಿತ ತೆರಿಗೆ ಪಾವತಿದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತೆರಿಗೆ ಪಾವತಿದಾರರ ಸನ್ನದನ್ನು ಪರಿಚಯಿಸುವ ಪ್ರಸ್ತಾಪವೂ ಬಜೆಟ್‌ನಲ್ಲಿದೆ. ಬ್ಯಾಂಕ್‌ ಹಗರಣಗಳಿಂದ ಭೀತರಾಗಿರುವ ಮಧ್ಯಮ ವರ್ಗದ ಠೇವಣಿದಾರರಿಗಾಗಿ, ಪ್ರತಿಯೊಬ್ಬರ ಠೇವಣಿ ಮೇಲಿನ ವಿಮೆಯನ್ನು ರೂ. ೧ ಲಕ್ಷದಿಂದ ರೂ. ೫ ಲಕ್ಷಕ್ಕೆ ಏರಿಸಲು ಠೇವಣಿ ವಿಮೆ ಮತ್ತು ಜಮಾ ಖಾತರಿ ನಿಗಮಕ್ಕೆ (ಡಿಪಾಸಿಟ್‌ ಇನ್ಷೂರೆನ್ಸ್‌ ಅಂಡ್‌ ಡಿಪಾಸಿಟ್‌ ಗ್ಯಾರಂಟಿ ಕವರೇಜ್‌ – ಡಿಐಸಿಜಿಸಿ) ಅನುಮತಿ ನೀಡಲಾಗಿದೆ. ಮೋದಿ ಅವರು ಬಯಸಿದ ರೀತಿಯಲ್ಲಿಯೇ ಸೀತಾರಾಮನ್‌ ಅವರ ಬಜೆಟ್‌ ಆಯ್ದ ವಲಯಗಳಿಗೆ ದೊಡ್ಡ ಮಟ್ಟದ ಹಂಚಿಕೆಯನ್ನು ಮಾಡಿದ್ದು, ಅಂತಿಮವಾಗಿ ಬರಲಿರುವ ತಿಂಗಳುಗಳಲ್ಲಿ ಈ ವಲಯಗಳು ಪುಟಿದೇಳುವ ನಿರೀಕ್ಷೆ ಮಾಡಲಾಗಿದೆ.

ಸೀತಾರಾಮನ್‌ ಅವರು ಬಜೆಟ್‌ ಮಂಡಿಸಿದ ಕೆಲ ಗಂಟೆಗಳ ನಂತರ ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಕುಸಿಯುವ ಮೂಲಕ ಪ್ರತಿಕ್ರಯೆ ವ್ಯಕ್ತಪಡಿಸಿತು. ಆದರೆ, ಮೋದಿ ಅವರು ಸಬ್‌ಕಾ ಸಾಥ್‌ (ಎಲ್ಲರೊಂದಿಗೆ) ಬಜೆಟ್‌ ಇದು ಎಂದು ಹೇಳಿದರಲ್ಲದೇ, ದೃಷ್ಟಿಕೋನ ಮತ್ತು ಕ್ರಿಯಾಶೀಲತೆಯನ್ನು ಹೊಂದಿದೆ ಎಂದು ವರ್ಣಿಸಿದರು. ಬಜೆಟ್‌ನಲ್ಲಿ ಪ್ರಸ್ತಾಪವಾಗಿರುವ ಸುಧಾರಣಾ ಕ್ರಮಗಳು ಆರ್ಥಿಕತೆಯನ್ನು ತೀವ್ರಗೊಳಿಸುವುದಲ್ಲದೇ, ದೇಶದ ಪ್ರತಿಯೊಬ್ಬ ನಾಗರಿಕನನ್ನೂ ಸಶಕ್ತಗೊಳಿಸುತ್ತವೆ ಹಾಗೂ ಆರ್ಥಿಕತೆಯ ಬುನಾದಿಯನ್ನು ಈ ದಶಕದಲ್ಲಿಯೇ ಬಲಪಡಿಸುತ್ತವೆ ಎಂದು ಬಲವಾದ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನೀರಾವರಿ ಮತ್ತು ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದ ಇತರ ವಿಷಯಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹಣ ವ್ಯಯಿಸುವ ಮೂಲಕ ರೈತರ ಆದಾಯವನ್ನು ೨೦೨೨ರ ವೇಳೆಗೆ ದ್ವಿಗುಣಗೊಳಿಸುವ ಸರಕಾರದ ಗುರಿಯತ್ತ ಬಜೆಟ್‌ ಹೆಚ್ಚು ಗಮನ ಕೇಂದ್ರೀಕರಿಸಿದೆ. ಇದನ್ನು ನೋಡಿದರೆ, ಪ್ರಧಾನಮಂತ್ರಿಯವರ ಹೃದಯ ಗ್ರಾಮೀಣ ಭಾರತದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ನವೋದ್ಯಮಗಳನ್ನು (ಸ್ಟಾರ್ಟ್‌ ಅಪ್‌) ಉತ್ತೇಜಿಸುವ ಮೂಲಕ ಪ್ರಸಕ್ತ ಬಜೆಟ್‌ ದೇಶದ ಯುವಜನತೆಗೆ ನವ ಚೈತನ್ಯವನ್ನೂ ನೀಡಿದೆ.

ಆದರೆ, ಎಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂಬುದರ ಕುರಿತು ಬಜೆಟ್‌ನಲ್ಲಿ ಸ್ಪಷ್ಟ ಮತ್ತು ನಿಖರ ವಿವರಗಳನ್ನು ನೀಡದ್ದರ ಕುರಿತು ಮೋದಿ ಟೀಕಾಕಾರರು ಪ್ರಶ್ನಿಸಿದ್ದಾರೆ. ಆದರೆ, “ಉದ್ಯೋಗ ಸೃಷ್ಟಿಯ ಪ್ರಮುಖ ಕ್ಷೇತ್ರಗಳೆಂದರೆ ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನ. ಉದ್ಯೋಗ ನಿರ್ಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಈ ನಾಲ್ಕೂ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ” ಎಂದು ಮೋದಿ ಮತ್ತು ಸೀತಾರಾಮನ್‌ ಇಬ್ಬರೂ ಸ್ಪಷ್ಟವಾಗಿ ಹೇಳಿದ್ದಾರೆ.

ಉಡಾನ್‌ ಯೋಜನೆಯನ್ನು ಬೆಂಬಲಿಸುವ ಅಂಗವಾಗಿ, ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯ ಮೂಲಕ ೨೦೨೪ರ ವೇಳೆಗೆ ಇನ್ನೂ ೧೦೦ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದು ಹಾಗೂ ೧೫೦ ಹೊಸ ರೈಲುಗಳ ಕಾರ್ಯಾಚರಣೆಯನ್ನು ಸಾಧ್ಯವಾಗಿಸುವ ಯೋಜನೆಯ ಮೂಲಕ ಮೂಲಸೌಕರ್ಯ ವಲಯವನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗಿದೆ.

“ಎಲ್ಲಾ ನಾಗರಿಕರ ಪರವಾಗಿ ನಿರಾಳ ಬದುಕನ್ನು ಸಾಧ್ಯವಾಗಿಸುವುದು ನಮ್ಮ ಗುರಿಯಾಗಿರಬೇಕು ಎಂಬ ಮಾದರಿಯನ್ನು ಪ್ರಧಾನಮಂತ್ರಿಯವರು ಹೊಂದಿದ್ದಾರೆ” ಎಂಬ ಸೀತಾರಾಮನ್‌ ಹೇಳಿಕೆ ಮೋದಿ ಅವರ ಆದ್ಯತಾ ಕ್ಷೇತ್ರಗಳ ಹಿನ್ನೆಲೆಯಲ್ಲಿ ಅವರ ರಾಜಕೀಯ ಉದ್ದೇಶಗಳನ್ನು ಪ್ರತಿಫಲಿಸಿದೆ. ೨೦೨೦-೨೧ರ ಅವಧಿಯಲ್ಲಿ ಕೃಷಿ ಸಾಲ ಗುರಿಯನ್ನು ರೂ. ೧೫ ಲಕ್ಷ ಕೋಟಿಗಳಿಗೆ ಏರಿಸಿರುವಂತಹ ಕೃಷಿ ಸ್ನೇಹಿ ಕ್ರಮಗಳ ಮೂಲಕ ಇದನ್ನು ಸಾಧಿಸಲಾಗಿದೆ. “ಕಿಸಾನ್‌ ರೈಲ್”‌ ಮತ್ತು “ಕೃಷಿ ಉಡಾನ್‌” ಯೋಜನೆಗಳ ಮೂಲಕ ಬೇಗ ಹಾಳಾಗುವ ಕೃಷಿ ಉತ್ಪನ್ನಗಳನ್ನು ಅನಿಯಮಿತ ಪ್ರಮಾಣದಲ್ಲಿ ಸಾಗಿಸುವ ಶೀತಲ ಸರಬರಾಜು ವ್ಯವಸ್ಥೆಯನ್ನು ನಿರ್ಮಿಸಲಾಗುವುದು. ಅಲ್ಲದೇ ಅಂದಾಜು ೨೦ ಲಕ್ಷ ರೈತರಿಗೆ ಸ್ವತಂತ್ರ ಸೌರ ಪಂಪ್‌ಗಳನ್ನು ನಿರ್ಮಿಸಲು ಪಿಎಂ-ಕುಸುಮ್‌ (ಪ್ರಧಾನಮಂತ್ರಿ ಕಿಸಾನ್‌ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್‌ – ಪ್ರಧಾನಮಂತ್ರಿ ಅವರ ರೈತ ವಿದ್ಯುತ್‌ ಸುರಕ್ಷೆ ಮತ್ತು ಉನ್ನತಿ ಮಹಾ ಅಭಿಯಾನ) ಯೋಜನೆಯು ನೆರವಾಗಲಿದೆ.

ನೇಮಕಾತಿಯನ್ನು ಸರಳೀಕರಿಸುವ ಹೊಸ ರಾಷ್ಟ್ರೀಯ ನೇಮಕಾತಿ ಏಜೆನ್ಸಿ (ನ್ಯಾಷನಲ್‌ ರಿಕ್ರೂಟ್‌ಮೆಂಟ್‌ ಏಜೆನ್ಸಿ -–ಎನ್‌ಆರ್‌ಎ) ಸ್ಥಾಪಿಸುವ ಘೋಷಣೆ ಕುರಿತು ಮೋದಿ ಅವರು ಹೆಚ್ಚು ಹುಮ್ಮಸ್ಸು ಪ್ರಕಟಿಸಿದ್ದಾರೆ. ಇದರಿಂದಾಗಿ, ಸರಕಾರದ ಕೆಳ ಹಂತದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸುಲಭವಾಗುವ ಭರವಸೆ ವ್ಯಕ್ತವಾಗಿದೆ. “ಸರಕಾರದ ವಿವಿಧ ಹುದ್ದೆಗಳಿಗೆ ವಿವಿಧ ಪರೀಕ್ಷೆಗಳನ್ನು ನಡೆಸುವುದಕ್ಕಿಂತ, ರಾಷ್ಟ್ರೀಯ ನೇಮಕಾತಿ ಏಜೆನ್ಸಿಯು ಒಂದೇ ಆನ್‌ಲೈನ್‌ ಪರೀಕ್ಷೆಯನ್ನು ನಡೆಸುವುದು" ಎಂಬುದನ್ನು ಅವರು ಬೊಟ್ಟು ಮಾಡಿ ತೋರಿಸಿದ್ದಾರೆ.

ಮೂರು ಪ್ರಮುಖ ವಿಷಯಗಳ ಸುತ್ತ ಪ್ರಸಕ್ತ ಬಜೆಟ್‌ ನೇಯಲ್ಪಟ್ಟಿದೆ ಎಂದು ಸೀತಾರಾಮನ್‌ ಅವರು ಹೇಳಿರುವುದು ಪ್ರಧಾನಮಂತ್ರಿಯವರ ನಂಬಿಕೆಯ “ಹಂಬಲಿಸುವ ಭಾರತ”ದ ಪರಿಕಲ್ಪನೆಯನ್ನು ಪ್ರತಿನಿಧಿಸಿದೆ. ಮೋದಿ ಅವರ ಪ್ರಕಾರ ಇದು ಬಲವಾದ ರಾಜಕೀಯ ಘೋಷಣೆಯಾಗಿದೆ.

ಮೋದಿ ಅವರ ಪ್ರಕಾರ, ಹಂಬಲಿಸುವ ಭಾರತ ಎಂಬುದು ಸಮಾಜದ ಎಲ್ಲಾ ವರ್ಗಗಳು ಉತ್ತಮ ಬದುಕಿನ ಮಟ್ಟಕ್ಕಾಗಿ ಹಂಬಲಿಸುವುದಾಗಿದೆ. ಅಂದರೆ, ಆರೋಗ್ಯ, ಶಿಕ್ಷಣ ಮತ್ತು ಉತ್ತಮ ಉದ್ಯೋಗಳನ್ನು ಪಡೆಯುವುದಾಗಿದೆ. ಈ ಮೂರೂ ವಿಶಾಲ ಪರಿಕಲ್ಪನೆಗಳು ಭ್ರಷ್ಟಾಚಾರಮುಕ್ತ, ನೀತಿ ಚಾಲಿತ ಉತ್ತಮ ಆಡಳಿತ ಹಾಗೂ ಸ್ವಚ್ಛ ಮತ್ತು ಸಶಕ್ತ ಹಣಕಾಸು ಕ್ಷೇತ್ರದಿಂದ ಜೋಡಣೆಯಾಗಿರುತ್ತವೆ.

ಇನ್ನು ಸ್ಥಳೀಯ ಉತ್ಪಾದನೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಭಾರತದಲ್ಲಿ ಉತ್ಪಾದನೆಯಾಗುವ ವಸ್ತುಗಳ ಆಮದನ್ನು ನಿಷೇಧಿಸಲು ಅಥವಾ ಅಂತಹ ವಸ್ತುಗಳ ಅಬಕಾರಿ ಸುಂಕವನ್ನು ಹೆಚ್ಚಿಸಲು ಸರಕಾರ ಮುಂದಾಗಿದೆ. ಚೀನಾದಂತಹ ದೇಶಗಳಿಂದ ಇಂತಹ ವಸ್ತುಗಳನ್ನು ತಂದು ಸುರಿಯುವುದನ್ನು ತಪ್ಪಿಸುವ ಮೂಲಕ ಸ್ಥಳೀಯ ಘಟಕಗಳು ಮುಚ್ಚುವಂತಾಗುವುದನ್ನು ತಡೆಯುವುದೇ ಈ ಕ್ರಮದ ಉದ್ದೇಶ. ಇದರಿಂದಾಗಿ, ಭಾರತವು ತನ್ನ ಉದ್ಯಮಗಳನ್ನು ರಕ್ಷಿಸಿಕೊಳ್ಳುವ ಕ್ರಮ ಅನುಸರಿಸುತ್ತಿದೆ ಎಂಬ ಆರೋಪಗಳನ್ನು ಇತರ ದೇಶಗಳು ಮಾಡುವ ಅಪಾಯ ಇರುವುದಾದರೂ, ಭಾರತೀಯ ಉದ್ಯಮವನ್ನು ಸದೃಢಗೊಳಿಸಲು ಯಾವ ಬೆಲೆಯೂ ಹೆಚ್ಚಿನದಲ್ಲ.

- ಶೇಖರ್‌ ಅಯ್ಯರ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.