ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬಡ ಕುಟುಂಬದ ಮಹಿಳೆಯೊಬ್ಬರ ಖಾತೆಗೆ 30 ಕೋಟಿ ಜಮೆಯಾಗಿದ್ದ ಹಣಕ್ಕೆ ಸಂಬಂಧಿಸಿದಂತೆ ಅಪರಿಚಿತ ಆನ್ಲೈನ್ ವಂಚಕರು ಅಕ್ರಮ ವಹಿವಾಟು ನಡೆಸಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೂವಿನ ವ್ಯಾಪಾರಿ ಸಯ್ಯದ್ ಮಲ್ಲಿಕ್ ಬುಹ್ರಾನ್ ಅವರ ಪತ್ನಿ ರೆಹನಾ ಬಾನು ಅವರ ಖಾತೆಗೆ ಫೆಬ್ರವರಿ 3 ರಂದು 30 ಕೋಟಿ ರೂಪಾಯಿ ಜಮೆಯಾಗಿತ್ತು. ಈ ಕುರಿತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಸ್ಪಷ್ಟಪಡಿಸಿದ್ದು, 2015ರಲ್ಲಿ ಜನ್ಧನ್ ಖಾತೆ ಆರಂಭವಾದ ಮೂರು ತಿಂಗಳಲ್ಲಿ 30-40 ಲಕ್ಷ ರೂಪಾಯಿ ಅನುಮಾನಾಸ್ಪದವಾಗಿ ವಹಿವಾಟುಗಳು ನಡೆದಿವೆ ಎಂದು ತಿಳಿಸಿದರು.
ಇದನ್ನೂ ಓದಿ...ಅಬ್ಬಬ್ಬಾ... ಮಹಿಳೆ ಖಾತೆಗೆ ಬರೋಬ್ಬರಿ 30 ಕೋಟಿ ಜಮಾ: ಎಲ್ಲಿಂದ ಬಂತು ಇಷ್ಟೊಂದು ಹಣ?
ಇದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ನೂರಾರು ಪ್ರಕರಣಗಳು ಚಂಡೀಗಡ, ಮಹಾರಾಷ್ಟ್ರ ಮತ್ತು ಉತ್ತರಾಖಾಂಡ್ ರಾಜ್ಯಗಳಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ನಕಲಿ ಖಾತೆಗಳು, ವಂಚನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಸೈಬರ್ ಅಪರಾಧ ವಿಭಾಗ ತನಿಖೆ ನಡೆಸುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.
ಅಪರಿಚಿತ ಆನ್ಲೈನ್ ವಂಚಕರು ಒಟಿಪಿ ನಂಬರ್ ಕಳುಹಿಸಿ ಗ್ರಾಹಕರನ್ನು ಯಾಮಾರಿಸುತ್ತಾರೆ. ಇವುಗಳಿಂದಾಗಿ ಅಕ್ರಮ ವಹಿವಾಟು ನಡೆಸುತ್ತಿರುವವರ ಸಂಖ್ಯೆ ದಿನೇದಿನೇ ದುಪ್ಪಟ್ಟಾಗುತ್ತಿದೆ. ಆ ರೀತಿ ಬರುವ ಒಟಿಪಿ ಸಂಖ್ಯೆಗಳ ಬಗ್ಗೆ ಎಚ್ಚರ ಇರಲಿ ಎಂದು ಬ್ಯಾಕ್ ಸಲಹೆ ನೀಡಿದೆ.