ಮುಂಬೈ: ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಓರ್ವ ರೋಗಿ ಸಾವನ್ನಪ್ಪಿರುವ ಘಟನೆ ಮುಂಬೈನ ಮುಲುಂದ್ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಇದೇ ವೇಳೆ ಸುಮಾರು 40 ರೋಗಿಗಳನ್ನು ಹತ್ತಿರದ ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ.
ಸೋಮವಾರ ರಾತ್ರಿ ಅಪೆಕ್ಸ್ ಆಸ್ಪತ್ರೆಯಲ್ಲಿ ಘಟನೆ ಸಂಭವಿಸಿದ್ದು, ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಿದ ನಂತರ ರೋಗಿ ಮೃತಪಟ್ಟಿದ್ದಾನೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ. ಜನರೇಟರ್ನಲ್ಲಿ ಅಧಿಕ ಉಷ್ಣಾಂಶ ಕಾಣಿಸಿಕೊಂಡ ಕಾರಣದಿಂದ ಅಗ್ನಿ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಲುಂದ್ ಪ್ರದೇಶದಲ್ಲಿನ ಐದು ನರ್ಸಿಂಗ್ ಹೋಮ್ಗಳಿಗೆ ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ. ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ರೋಗಿಗಳ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಶಾಸಕ ಮಹಿರ್ ಕೊಟೆಚಾ ಮಾಹಿತಿ ನೀಡಿದ್ದಾರೆ.
ಸೋಮವಾರ ಸಂಜೆ 6.30ಕ್ಕೆ ಆಸ್ಪತ್ರೆಯ ಜನರೇಟರ್ನಲ್ಲಿ ಸ್ವಲ್ಪ ಮಟ್ಟದ ಬೆಂಕಿ ಕಾಣಿಸಿಕೊಂಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.