ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 35ಎ ವಿಧಿಯನ್ನು ರದ್ದು ಮಾಡುವ ಬಗ್ಗೆ ಯಾವುದೇ ತಯಾರಿ ನಡೆದಿಲ್ಲ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾಗಿ ಮಾಜಿ ಸಿಎಂ ಓಮರ್ ಅಬ್ದುಲ್ಲಾ ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಉಂಟಾಗಿರುವ ಗೊಂದಲಮಯ ಸ್ಥಿತಿ ಕುರಿತಾಗಿ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಆನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
35ಎ, 370ನೇ ವಿಧಿಯನ್ನು ರದ್ದು ಮಾಡುವ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆ ರಾಜ್ಯಪಾಲರನ್ನು ವಿಚಾರಿಸಲಾಯ್ತು. ಈ ಬಗ್ಗೆ ಘೋಷಣೆ ಮಾಡಲು ಯಾವುದೇ ತಯಾರಿ ನಡೆದಿಲ್ಲ ಎಂದು ಹೇಳಿದರು.
ಅಮರನಾಥ ಯಾತ್ರೆ ಹಾಗೂ ಯಾತ್ರಿಕರ ಸ್ಥಳಾಂತರ ಮಾಡಿದ ಅವಶ್ಯಕತೆಯಾದರೂ ಏನು? ಎಂಬ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿದೆ. ಆಗ ಮಾತ್ರ ಜನರು ಆತಂಕದಿಂದ ಮುಕ್ತರಾಗುತ್ತಾರೆ. ರಾಜ್ಯಪಾಲರಿಗಿಂತ ಕೇಂದ್ರ ಸರ್ಕಾರ ಹೇಳುವ ಮಾತು ಮಹತ್ವದ್ದಾಗುತ್ತೆ ಎಂದರು.
ರಾಜ್ಯದಲ್ಲಿ ಏನಾಗುತ್ತಿದೆ ಎಂದು ಯಾರಿಗೂ ತಿಳಿಯುತ್ತಿಲ್ಲ. ಅಧಿಕಾರಿಗಳು ಏನನ್ನೂ ಹೇಳುತ್ತಿಲ್ಲ. ಪ್ರಧಾನಿಗಳೇ ಈ ಬಗ್ಗೆ ಮಾಹಿತಿ ನೀಡಬೇಕು ಎಂದರು.