ಒಡಿಶಾ: ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿದ್ದ ಒಡಿಶಾದ ಜನರನ್ನು ತವರು ರಾಜ್ಯಕ್ಕೆ ಕರೆತರುವ ಕಾರ್ಯ ನಡೆದಿದೆ. ಅಷ್ಟೇ ಅಲ್ಲದೆ, ಇಂದು ಒಡಿಶಾದ ಜನರಿಗೆ ' ರಾಜಾ' ಹಬ್ಬದ ಸಂಭ್ರಮವಾಗಿದ್ದು, ಈ ದಿನದಂದು ರಾಜ್ಯಕ್ಕೆ ಮರಳುತ್ತಿರುವ ಜನರಿಗೆ ಪೈಲಟ್ ಒಡಿಯಾ ಭಾಷೆಯಲ್ಲಿ ಹಬ್ಬದ ಶುಭಾಶಯ ಕೋರಿದ್ದಾರೆ.
'ಅಜಿ ಅಪನಾ ಮನಂಕು ರಾಜಾ ರಾ ಅಭಿನಂದನ್ (ನಿಮ್ಮೆಲ್ಲರಿಗೂ ರಾಜಾ ಹಬ್ಬದ ಶುಭಾಶಯಗಳು). 'ಮು ಕ್ಯಾಪ್ಟನ್ ಮಧುಸ್ಮಿತಾ, ಅಪನಮನಂಕು ಏರ್ ಅರೇಬಿಯಾ ರಾ ಸ್ಪೆಷಲ್ ಫ್ಲೈಟ್ ತು ಸ್ವಾಗತ್ ಕರೂಚಿ' (ನಾನು ಕ್ಯಾಪ್ಟನ್ ಮಧುಸ್ಮಿತಾ, ನಿಮ್ಮೆಲ್ಲರನ್ನೂ ಏರ್ ಅರೇಬಿಯಾದ ವಿಶೇಷ ಹಾರಾಟಕ್ಕೆ ಸ್ವಾಗತಿಸುತ್ತಿದ್ದೇನೆ) ಎಂದು ಘೋಷಣೆ ಮಾಡಿದ್ದಾರೆ. ಇದನ್ನು ಕೇಳಿದ ಒಡಿಶಾದ ಜನರು ಸಂತಸಗೊಂಡಿದ್ದಾರೆ.
"ಈ ಶುಭ ದಿನದಂದು ನಿಮ್ಮೆಲ್ಲರನ್ನೂ ನಿಮ್ಮ ಕುಟುಂಬಗಳಿಗೆ ಹಿಂತಿರುಗಿಸುವುದು ನನ್ನ ಧರ್ಮ" ಎಂದು ಮಧುಸ್ಮಿತಾ ಪಟ್ನಾಯಕ್ ತನ್ನ ಘೋಷಣೆಯಲ್ಲಿ ಹೇಳಿದ್ದಾರೆ. ಇನ್ನು 'ಜೈ ಜಗನ್ನಾಥ್’ ಎನ್ನುವ ಮೂಲಕ ಘೋಷಣೆಯನ್ನು ಕೊನೆಗೊಳಿಸಿದ್ದಾರೆ.
ಭುವನೇಶ್ವರ ಮೂಲದ ಮತ್ತು ಪ್ರಸ್ತುತ ದುಬೈ ನಿವಾಸಿ ಕ್ಯಾಪ್ಟನ್ ಮಧುಸ್ಮಿತಾ ಪಟ್ನಾಯಕ್ ಅವರು ವಂದೇ ಭಾರತ್ ಮಿಷನ್ ಅಡಿ ಹೊರಟ 13ನೇ ವಿಮಾನದಲ್ಲಿ ಇಂದು ಬೆಳಗ್ಗೆ 8.00 ಗಂಟೆಗೆ ಶಾರ್ಜಾದಿಂದ ಒಡಿಶಾಗೆ ಸುಮಾರು 215 ಜನರನ್ನು ಕರೆತಂದಿದ್ದಾರೆ. ಇಂದು ಮಧ್ಯಾಹ್ನ 1.30ಕ್ಕೆ ರಾಜ್ಯಕ್ಕೆ ವಿಮಾನ ತಲುಪಲಿದೆ.