ಕಾಟ್ಮಂಡು: ನೆಪಾಳದ ಹಲವು ನದಿಗಳಲ್ಲಿ ಹೆಚ್ಚುತ್ತಿರುವ ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 43ಕ್ಕೆ ತಲುಪಿದ್ದು, 24 ಜನರು ನಾಪತ್ತೆಯಾಗಿದ್ದಾರೆ.
ಹೆಚ್ಚುತ್ತಿರುವ ಮುಂಗಾರು ಮಳೆಯ ಪರಿಣಾಮ ಅನೇಕ ಭಾಗಗಳಲ್ಲಿ ಪ್ರವಾಹದ ಜೊತೆಗೆ ಭೂ ಕುಸಿತದ ಭೀತಿ ಎದುರಾಗಿದೆ. ಮುಖ್ಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲಿನ ನಿವಾಸಿಗಳಿಗೆ ಬಿಕ್ಕಟ್ಟಿನ ಪರಿಸ್ಥಿತಿ ಸೃಷ್ಟಿಸಿದೆ.
ಪ್ರವಾಹಕ್ಕೆ ಒಳಗಾದ ಪ್ರದೇಶಕ್ಕೆ ಅಗತ್ಯ ಸಾಮಾಗ್ರಿ ಜೊತೆಗೆ ಕೆಲವು ಜನರನ್ನು ಸಹಾಯಕ್ಕಾಗಿ ಕಳುಹಿಸಲಾಗಿದೆ ಎಂದು ನೇಪಾಳದ ಪೊಲೀಸರು ಮಾಹಿತಿ ನೀಡಿದ್ದಾರೆ. ಜೊತೆಗೆ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಪರಿಹಾರ ಕಾರ್ಯಾಚರಣೆಗಳು ತ್ವರಿತವಾಗಿ ನಡೆಯುತ್ತಿವೆ ಎಂದು ಹೇಳಿದ್ದಾರೆ. ಹಲವಾರು ಕಟ್ಟಡಗಳು ಮತ್ತು ಮನೆಗಳು ಬಿದ್ದಿವೆ. ಜನರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರವಾಹದಿಂದ ಸುಮಾರು ಆರು ಸಾವಿರ ಜನ ತೀವ್ರ ಪರಿಣಾಮ ಎದುರಿಸುವಂತಾಗಿದೆ.
ಸೇನೆಯ ವಕ್ತಾರ ಬಿಜಾನ್ ದೇವ್ ಪಾಂಡೆ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಸುಮಾರು 150 ಜನರನ್ನು ಮೀಸಲಿಡಲಾಗಿದೆಯೆಂದು ತಿಳಿಸಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ, ಈ ವಾರ ಅತೀ ಹೆಚ್ಚು ಮಳೆ ಬರುವ ಸಾಧ್ಯತೆ ಇದೆ. ಜನರು ಜಾಗೃತರಾಗಿರಬೇಕೆಂದು ಹವಾಮಾನ ಇಲಾಖೆ ಎಚ್ಚರಿಸಿದೆ.