ಅನಂತನಾಗ್ (ಜಮ್ಮು-ಕಾಶ್ಮೀರ): ಕೊರೊನಾ ವೈರಸ್ ತಡೆಗೆ ಮಾಡಿದ ಲಾಕ್‌ಡೌನ್‌ನಿಂದ ಜನರ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಸರ್ಕಾರ ಎಲ್ಲಾ ವಿಧದಲ್ಲಿಯೂ ಜನರಿಗೆ ಸಹಾಯ ಮಾಡಿದೆ ಎಂದು ಹೇಳುತ್ತಿದೆ. ಆದರೆ, ಬಡ ಜನರ ಜೀವನ ಅತ್ಯಂತ ಕಷ್ಟಕರವಾಗಿದೆ. ಲಾಕ್ಡೌನ್ ಸಮಯದಲ್ಲಿ ಸಿಗಬೇಕಾದ ಸವಲತ್ತುಗಳು ಸಿಕ್ಕಿಲ್ಲ ಎಂಬುದು ಸಾಬೀತಾಗಿದೆ.
ಗುಜ್ಜರ್ ಬಕರ್ವಾಲ್ ಅಲೆಮಾರಿಗಳು ಕಳೆದ ಒಂದು ತಿಂಗಳಿನಿಂದ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಉರನ್‌ಹಾಲ್‌ನಲ್ಲಿರುವ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡುಬಿಟ್ಟಿದ್ದಾರೆ. ಬಡವರಿಗೆ ಸಹಾಯ ಮಾಡಲು ಹಲವಾರು ಎನ್‌ಜಿಒಗಳು ಮುಂದೆ ಬಂದಿದ್ದರೂ ಈ ಕಷ್ಟದ ಸಮಯದಲ್ಲಿ ಕಡೆಗಣಿಸಲ್ಪಟ್ಟಿರುವ ಅರ್ಹ ನೂರಾರು ಜನ ಇನ್ನೂ ಇದ್ದಾರೆ. ಪ್ರತಿದಿನ ಸಹಾಯಕ್ಕಾಗಿ ಕಾಯುತ್ತಿರುವ ಇವರಿಗೆ ಬರಿ ನಿರಾಶೆ ಕಾಡಿದೆ.
ತಮ್ಮ ಕಷ್ಟಗಳ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಇತ್ತ ಕೆಲಸವೂ ಇಲ್ಲದೇ ಅತ್ತ ಹಣವೂ ಇಲ್ಲದೇ ಹಸಿವಿನಿಂದ ಬಳಲುತ್ತಿದ್ದೇವೆ. ಲಾಕ್ಡೌನ್ ಆರಂಭವಾದಗಿನಿಂದ ಜೀವನದ ಅತ್ಯಂತ ಕಷ್ಟದ ದಿನಗಳನ್ನು ಕಂಡಿದ್ದೇವೆ. ಆದರೆ, ಈವರೆಗೆ ಸರ್ಕಾರ ಅಥವಾ ಯಾವುದೇ ಸರ್ಕಾರೇತರ ಸಂಸ್ಥೆಯಿಂದ ಸಹಾಯ ದೊರೆತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಲಾಕ್ಡೌನ್ ಸಡಿಲಿಕೆಯಾದ ಮೇಲೆ ಕೆಲಸ ಹುಡುಕಲು ಪ್ರಯತ್ನಿಸಿದ್ದೇವೆ. ಆದಾಗ್ಯೂ, ಕೊರೊನಾ ವೈರಸ್ ಭಯದಿಂದಾಗಿ ನಮ್ಮನ್ನು ಯಾರೂ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಣಕಾಸಿನ ತೊಂದರೆಗಳನ್ನು ನಿಭಾಯಿಸುವ ಸಲುವಾಗಿ ತಾವು ಸಾಕಿರುವ ಪ್ರಾಣಿಗಳನ್ನು ಮಾರಿ ಜೀವನ ಸಾಗಿಸುತ್ತಿದ್ದಾರೆ.