ನೋಯ್ಡಾ (ಉತ್ತರ ಪ್ರದೇಶ) : ಕೊರೊನಾ ನೆಗೆಟಿವ್ ಬಂದ ಹಿನ್ನೆಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಇಬ್ಬರು ಸೋಂಕಿತರ ವರದಿ ಮತ್ತೆ ಪಾಸಿಟಿವ್ ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಪೂರ್ಣ ಚೇತರಿಕೆಗೊಂಡು ವರದಿ ನೆಗೆಟಿವ್ ಬಂದ ಕಾರಣ ಇಬ್ಬರು ರೋಗಿಗಳನ್ನು ಕಳೆದ ಗುರುವಾರ ಗ್ರೇಟರ್ ನೋಯ್ಡಾದ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆ( ಜಿಮ್ಸ್)ನಿಂದ ಡಿಸ್ಚಾರ್ಜ್ ಮಾಡಲಾಗಿತ್ತು, ಇದೀಗ ಮತ್ತೊಂದು ವರದಿ ಪಾಸಿಟಿವ್ ಬಂದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಗ್ಯ ಇಲಾಖೆಯ ಪ್ರೊಟೋಕಾಲ್ ಪ್ರಕಾರ ಯಾವುದೇ ಕೋವಿಡ್ ರೋಗಿ ಗುಣಮುಖರಾದ ಬಳಿಕ 14 ದಿನಗಳವರೆಗೆ ಪ್ರತ್ಯೇಕವಾಗಿಟ್ಟು ಕೋವಿಡ್ ಲಕ್ಷಣಗಳಿವೆಯ ಎಂಬುವುದನ್ನು ಪರಿಶೀಲೀಸಿ, ಯಾವುದೇ ಲಕ್ಷಣ ಕಂಡು ಬರದಿದ್ದರೆ ನಂತರ ಮನೆಗೆ ಕಳುಹಿಸಿಕೊಡಲಾಗುತ್ತದೆ. ಅದೇ ರೀತಿ ಇವರನ್ನೂ 14 ದಿನಗಳವರೆಗೆ ಪ್ರತ್ಯೇಕವಾಗಿಡಲಾಗಿತ್ತು. ಎಲ್ಲಾ ರೀತಿಯ ಅಗತ್ಯ ಪರೀಕ್ಷೆಗಳನ್ನೂ ಮಾಡಲಾಗಿತ್ತು. ಆದರೆ, ಡಿಸ್ಜಾರ್ಜ್ ಮಾಡುವ ಮೊದಲು ಕೊನೆಯದಾಗಿ ಪರೀಕ್ಷೆ ನಡೆಸಿ, ಸ್ಯಾಂಪಲ್ಸ್ನ್ನು ಅಲೀಘರ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದೆ. ಹೀಗಾಗಿ ಇಬ್ಬರನ್ನೂ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಮರು ದಾಖಲಿಸಿದ ನಂತರ ಇಬ್ಬರನ್ನು ಪರೀಕ್ಷೆಗೆ ಒಳಪಡಿಸಿ ಸ್ಯಾಂಪಲ್ಸ್ಅನ್ನು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್ಸಿಡಿಸಿ)ಗೆ ಕಳುಹಿಸಲಾಗಿತ್ತು. ಆ ವರದಿ ಮತ್ತೆ ನೆಗೆಟಿವ್ ಬಂದಿದೆ. ಹೀಗಾಗಿ, ಕೊನೆಯದಾಗಿ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಿರುವ ವೈದ್ಯರು ಮತ್ತೆ ಸ್ಯಾಂಪಲ್ಸ್ನ್ನು ಎನ್ಸಿಡಿಸಿಗೆ ಕಳುಹಿಸಿದ್ದಾರೆ. ಸದ್ಯ ಕೊನೆಯ ಪರೀಕ್ಷೆಯ ವರದಿಗಾಗಿ ನಿರೀಕ್ಷಿಸಲಾಗುತ್ತಿದ್ದು. ವರದಿ ಕೈ ಸೇರುವವರೆಗೆ ಇಬ್ಬರೂ ಆಸ್ಪತ್ರೆಯಲ್ಲಿ ಇರಲಿದ್ದಾರೆ.
ದೆಹಲಿಯ ಸಮೀಪವಿರುವ ಪಶ್ಚಿಮ ಉತ್ತರ ಪ್ರದೇಶದ ಗೌತಮ್ ಬುದ್ದ ನಗರದಲ್ಲಿ ಇದುವರೆಗೆ 64 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಆಗ್ರಾದ ಬಳಿಕ ರಾಜ್ಯದಲ್ಲಿ ಅತೀಹೆಚ್ಚು ಕೋವಿಡ್ ಪ್ರಕರಣ ದಾಖಲಾದ ಪ್ರದೇಶ ಎನಿಸಿಕೊಂಡಿದೆ.