ನೋಯ್ಡಾ (ಉತ್ತರ ಪ್ರದೇಶ): ರಾಷ್ಟ್ರ ರಾಜಧಾನಿಯಲ್ಲಿ ಇಬ್ಬರು ಶಂಕಿತ ಭಯೋತ್ಪಾದಕರನ್ನು ಸೋಮವಾರ ರಾತ್ರಿ ಬಂಧಿಸಿದ ಹಿನ್ನೆಲೆ, ಗೌತಮ್ ಬುದ್ಧ ನಗರದ ಪೊಲೀಸರು ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿ ಹೆಚ್ಚಿನ ಬಿಗಿ-ಬಂದೋಬಸ್ತ್ ಕ್ರಮ ಕೈಗೊಂಡಿದ್ಧಾರೆ.
ದೆಹಲಿ ಪೊಲೀಸರ ವಿಶೇಷ ತಂಡ ಸೋಮವಾರ ರಾತ್ರಿ ಇಬ್ಬರು ಶಂಕಿತ ಜೈಶ್-ಎ-ಮೊಹಮ್ಮದ್ (ಜೆಎಂ) ಸಂಘಟನೆಗೆ ಸೇರಿದವರು ಎನ್ನಲಾದ ಲತೀಫ್ ಮಿರ್ (22) ಹಾಗೂ ಅಶ್ರಫ್ ಖತಾನಾನನ್ನು ಸರೈ ಕೇಲ್ ಖಾನ್ ಬಳಿ ಬಂಧಿಸಿತ್ತು. ಈ ಹಿನ್ನೆಲೆ, ನೋಯ್ಡಾದಲ್ಲಿ ಅತೀ ಹೆಚ್ಚು ಕೈಗಾರಿಕಾ ಪ್ರದೇಶಗಳು ಅಸ್ತಿತ್ವದಲ್ಲಿರುವುದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ನೋಯ್ಡಾ ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದ್ದಾದರೂ ಸಹ ದೆಹಲಿಗೆ ಅತ್ಯಂತ ಸಮೀಪವಾಗಿದೆ. ದೆಹಲಿಯಲ್ಲಾದ ಇಂಥ ಬೆಳವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ನೊಯ್ಡಾ ಮೇಲೆಯೂ ಸಹ ಪರಿಣಾಮಗಳು ಬೀರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಗಡಿ ಪ್ರದೇಶದಲ್ಲಿ ಬಿಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ರಣವಿಜಯ್ ಸಿಂಗ್, ಈಗಾಗಲೇ ಉತ್ತರ ಪ್ರದೇಶ ಹಾಗೂ ದೆಹಲಿಯ ಗಡಿ ಭಾಗದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ವಾಹನಗಳ ಪರಿಶೀಲನೆ ನಡೆಸಲಾಗುತ್ತಿದೆ. ಅದಲ್ಲದೆ, ದೆಹಲಿಯಲ್ಲಾದ ಘಟನೆಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ದೊರೆತಿದ್ದು, ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.