ಲಖನೌ: ಉತ್ತರಪ್ರದೇಶದ ಸಚಿವರು ಇನ್ಮುಂದೆ ಸಂಪುಟ ಸಭೆ ವೇಳೆ ಮೊಬೈಲ್ ತರದಂತೆ ಸಿಎಂ ಯೋಗಿ ಆದಿತ್ಯನಾಥ ಖಡಕ್ ಆದೇಶ ನೀಡಿದ್ದಾರೆ.
ಸಿಎಂ ಆದಿತ್ಯನಾಥ ಅವರು ಇನ್ಮುಂದೆ ಸಂಪುಟ ಸಭೆಗಳಿಗೆ ಮೊಬೈಲ್ ತರದಂತೆ ಆದೇಶಿಸಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನೂಪ್ ಪಾಂಡೆ ಸುತ್ತೋಲೆ ಹೊರಡಿಸಿದ್ದಾರೆ.
ಸಭೆ ವೇಳೆ ಮೊಬೈಲ್ಗಳಿಂದ ಅಡಚಣೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಗಾಗಿ ಸಭೆಯಲ್ಲಿ ಭಾಗವಹಿಸುವ ಎಲ್ಲ ಮಂತ್ರಿಗಳು ಮೊಬೈಲ್ ಅನ್ನು ಹೊರಗಿಟ್ಟೇ ಹಾಜರಾಗಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ, ಸಿಎಂ ಅವರನ್ನು ಮನೆಯಲ್ಲಾಗಲೀ, ಕಚೇರಿಯಲ್ಲಾಗಲೀ ಭೇಟಿ ಮಾಡುವ ಜನರೂ ಮೊಬೈಲ್ ತರುವಂತಿಲ್ಲ. ಅಂತೆಯೇ, ಸಚಿವರ ಕಚೇರಿಗಳಲ್ಲಿ ಹಾಗೂ ಕಾರ್ಯದರ್ಶಿಗಳನ್ನು ಭೇಟಿ ಮಾಡುವಾಗಲೂ ಮೊಬೈಲ್ ತರುವಂತಿಲ್ಲ ಎಂದು ಆದೇಶಿಸಲಾಗಿದೆ.
ಸಭೆ ವೇಳೆ ಕೆಲ ಅಧಿಕಾರಿಗಳು ನಿಗಾ ವಹಿಸದೆ, ಮೊಬೈಲ್ನಲ್ಲಿ ಬ್ಯುಸಿಯಾಗಿದ್ದನ್ನು ನೋಡಿಯೇ ಸಿಎಂ,ಎಲ್ಲರಿಗೂ ಅನ್ವಯಿಸುವಂತೆ ಈ ಆದೇಶ ನೀಡಿದ್ದಾರೆ ಎಂದು ಸಚಿವರೊಬ್ಬರು ಸಹ ಹೇಳಿದ್ದಾರೆ.