ಪಣಜಿ (ಗೋವಾ): ಕೊರೊನಾ ವಿರುದ್ಧದ ಹೋರಾಟದಲ್ಲಿ ಗೋವಾ ರಾಜ್ಯ ಸದ್ಯ ವೈರಸ್ನಿಂದ ಮುಕ್ತಿ ಪಡೆದಿದೆ. ಆದರೆ, ಕೊರೊನಾ ಭೀತಿ ಮಾತ್ರ ಇನ್ನೂ ಹಾಗೆಯೇ ಉಳಿದಿದೆ. ಈ ಹಿನ್ನೆಲೆ ಸರ್ಕಾರ ಹೊಸ ನೀತಿಯೊಂದನ್ನು ಜಾರಿಗೆ ತರಲು ಮುಂದಾಗಿದೆ. ರಾಜ್ಯ ಸರ್ಕಾರ ತಯಾರಿಸುತ್ತಿರುವ ಕ್ರಿಯಾ ಯೋಜನೆ ಪ್ರಕಾರ ಇನ್ನು ಮುಂದೆ ಗೋವಾದಲ್ಲಿ ಪೆಟ್ರೋಲ್ ಹಾಗೂ ರೇಷನ್ ಕೊಂಡುಕೊಳ್ಳಲು ಮಾಸ್ಕ್ ಧರಿಸುವುದು ಕಡ್ಡಾಯವಾಗಲಿದೆ ಎಂದು ತಿಳಿದುಬಂದಿದೆ.
ಕೋವಿಡ್ -19ರ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸುತ್ತಿರುವ ಗೋವಾ ಸರ್ಕಾರದ ರಾಜ್ಯ ಕಾರ್ಯಕಾರಿ ಸಮಿತಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆಯನ್ನು ಜಾರಿಗೊಳಿಸುವ ಕ್ರಿಯಾ ಯೋಜನೆಯನ್ನು ರೂಪಿಸಲು ಗುರುವಾರ ನಿರ್ಧರಿಸಿದೆ.
ಫೇಸ್ ಕವರ್ ಅಥವಾ ಮುಖವಾಡಗಳ ಬಳಕೆಯನ್ನು ರಾಜ್ಯವು ಜಾರಿಗೊಳಿಸಬೇಕಾಗಿದೆ ಎಂದು ಎಸ್ಇಸಿ ನಿರ್ಧರಿಸಿದೆ. ಇದನ್ನು ಸಕ್ರಿಯಗೊಳಿಸಲು, ರಾಜ್ಯವು ಮಾಸ್ಕ್ ಇಲ್ಲದಿದ್ದರೆ - ಪೆಟ್ರೋಲ್ ಇಲ್ಲ, ಮಾಸ್ಕ್ ಇಲ್ಲದಿದ್ದರೆ ಪಡಿತರ ಇಲ್ಲ ಎಂಬಂತಹ ಅಭಿಯಾನವನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.