ನವದೆಹಲಿ: ಕಳೆದ ಆರು ತಿಂಗಳಿಂದ ಭಾರತ-ಚೀನಾ ಗಡಿಯಲ್ಲ ಯಾವುದೇ ಒಳನುಸುಳುವಿಕೆ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಾಹಿತಿ ನೀಡಿದ್ದಾರೆ.
ರಾಜ್ಯಸಭಾ ಸದಸ್ಯ ಡಾ. ಅನಿಲ್ ಅಗರ್ವಾಲ್, ಚೀನಾ ಅಥವಾ ಪಾಕಿಸ್ತಾನದಿಂದ ದೇಶಕ್ಕೆ ನುಸುಳಿದ್ದವರ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಿದ ನಿತ್ಯಾನಂದ ರಾಯ್, ಭಾರತ-ಚೀನಾ ಗಡಿಯಲ್ಲಿ ಸುಮಾರು 6 ತಿಂಗಳಿನಿಂದ ಒಳನುಸುಳುವಿಕೆ ಪ್ರಕರಣ ವರದಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನ ಫೆಬ್ರವರಿಯಿಂದ ಸುಮಾರು 47 ಬಾರಿ ಗಡಿ ನುಸುಳುವಿಕೆಗೆ ಯತ್ನ ನಡೆಸಿದೆ ಎಂದು ನಿತ್ಯಾನಂದ ರಾಯ್ ಹೇಳಿದ್ದು, ಲೈನ್ ಆಫ್ ಕಂಟ್ರೋಲ್ನಲ್ಲಿ ಒಳನುಸುಳುವಿಕೆ ತಡೆಯಲು ಕೇಂದ್ರ ಸರ್ಕಾರ ವಿವಿಧ ರೀತಿಗಳಲ್ಲಿ ಪ್ರಯತ್ನಿಸುತ್ತಿದೆ. ಗುಪ್ತಚರ ಇಲಾಖೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ. ಗಡಿಯಲ್ಲಿ ತಂತಿ ಬೇಲಿ ಅಳವಡಿಸಲಾಗಿದ್ದು, ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ರಾಯ್ ಹೇಳಿದರು.
ಮಂಗಳವಾರ ಭಾರತ-ಚೀನಾ ಗಡಿಯಲ್ಲಿನ ವಿಚಾರಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದ್ದು, ಜೂನ್ 15ರಂದು ನಡೆದ ಗಾಲ್ವಾನ್ ಸಂಘರ್ಷದ ಬಗ್ಗೆ ಸ್ಪಷ್ಟನೆ ನೀಡಿದ್ದರು.
ಭಯೋತ್ಪಾದಕರು ಲೈನ್ ಆಫ್ ಕಂಟ್ರೋಲ್ ದಾಟಿ ಒಳನುಸುಳಲು ಯತ್ನಿಸುತ್ತಾರೆ. ಅತಿಕ್ರಮಣ ಹಾಗೂ ಒಳನುಸುಳುವಿಕೆ ಬೇರೆ ಬೇರೆ ಎಂದು ನಿತ್ಯಾನಂದ ರಾಯ್ ಈ ವೇಳೆ ಹೇಳಿಕೆ ನೀಡಿದ್ದಾರೆ.