ನಾಗ್ಪುರ(ಮಹಾರಾಷ್ಟ್ರ): ಅತಿ ಶೀಘ್ರದಲ್ಲೇ ಅಥವಾ ಸ್ವಲ್ಪ ತಡವಾಗಿಯಾದರೂ ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರವನ್ನು ರಚಿಸುತ್ತೇವೆ. ಮಧ್ಯಂತರ ಚುನಾವಣೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಚುನಾವಣೆ ನಡೆದಂದಿನಿಂದ ಮಹಾರಾಷ್ಟದಲ್ಲಿ ಸರ್ಕಾರ ರಚನೆ ವಿಚಾರ ಕಗ್ಗಂಟಾಗಿ ಪರಿಣಮಿಸಿದ್ದು, ಯಾವೊಂದು ಪಕ್ಷವೂ ಸ್ಪಷ್ಟ ಬಹುಮತ ಪಡೆಯದ ಹಿನ್ನೆಲೆ ಸರ್ಕಾರ ರಚನೆ ಸಾಧ್ಯವಾಗಿರಲಿಲ್ಲ. ಅತ್ತ ಬಿಜೆಪಿ-ಶಿವಸೇನೆ ಮೈತ್ರಿ ಸರಿಹೊಂದದೆ, ಇತ್ತ ಮೂರನೇ ಅತಿ ದೊಡ್ಡ ಪಕ್ಷ ಎನ್ಸಿಪಿ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿಯೂ ಸಾಧ್ಯವಾಗಿಲ್ಲ. ಈ ನಡುವೆ ಸರ್ಕಾರ ರಚಿಸುವಂತೆ ರಾಜ್ಯಪಾಲರು ಬಿಜೆಪಿ, ಶಿವಸೇನೆ ಹಾಗೂ ಎನ್ಸಿಪಿ ನಾಯಕರನ್ನು ಆಹ್ವಾನಿಸಿದ್ದರು. ಆದರೂ ಬಹುಮತ ಸಾಬೀತುಪಡಿಸಲಾಗದ ಕಾರಣ ಸರ್ಕಾರ ರಚನೆ ಸಾಧ್ಯವಾಗಿರಲಿಲ್ಲ.
ಒಂದು ಹಂತದಲ್ಲಿ ನಮಗೆ ಜನಾದೇಶ ಇರುವುದು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಎಂದಿದ್ದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಈಗ ರಾಜ್ಯದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ರಾಜ್ಯಪಾಲರ ಭೇಟಿ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ತಿಳಿದು ಬರಲಿದೆ.
ಇನ್ನು ಸರ್ಕಾರ ರಚನೆ ವಿಚಾರವಾಗಿ ಇದೇ ಭಾನುವಾರ ಎನ್ಸಿಪಿ ಮುಖ್ಯಸ್ಥರು ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಡುವೆ ಸೋಮಚಾರ ಚರ್ಚೆ ನಡೆಯಲಿದೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.