ಪಾಲ್ಘರ್ (ಮಹಾರಾಷ್ಟ್ರ): ತನ್ನ ಐದು ದಿನಗಳ ನವಜಾತ ಶಿಶುವನ್ನು ಎತ್ತಿಕೊಂಡು ಬಾಣಂತಿಯೊಬ್ಬಳು 7 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿದ ಘಟನೆ ಬೆಳಕಿಗೆ ಬಂದಿದೆ. ಯಾವುದೇ ಸಾರಿಗೆ ವ್ಯವಸ್ಥೆ ಸಿಗದ ಕಾರಣ ಪತಿ-ಪತ್ನಿ ಪುಟ್ಟ ಮಗುವಿನೊಂದಿಗೆ ನಡೆದುಕೊಂಡು ಹೋಗಿದ್ದಾರೆ.
ತಮ್ಸಾಯಿ ಗ್ರಾಮದ ರಶೀದ್ ಖತುನ್ ಎಂಬ ಮಹಿಳೆಗೆ ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯ ಪತಿ ಸಾರಿಗೆ ವ್ಯವಸ್ಥೆ ಮಾಡಿ, ಆಕೆಯನ್ನು ಮನೋರ್ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಳು. ಆದರೆ ಆಕೆಗೆ ರಕ್ತದ ಅವಶ್ಯಕತೆ ಇದ್ದಿದ್ದರಿಂದ, ಆಸ್ಪತ್ರೆಯಲ್ಲಿ O- ರಕ್ತವಿಲ್ಲದ ಕಾರಣ ಬಾಣಂತಿಯನ್ನು ಆಂಬ್ಯುಲೆನ್ಸ್ ಮೂಲಕ ಥಾಣೆ ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿಯೂ ರಕ್ತದ ವ್ಯವಸ್ಥೆಯಾಗದ ಕಾರಣ ದಂಪತಿ ಪಾಲ್ಘರ್‌ಗೆ ಮರಳಲು ನಿರ್ಧರಿಸಿದರು.
ಆದರೆ ಯಾವುದೇ ಸಾರಿಗೆ ವ್ಯವಸ್ಥೆ ಸಿಗದೇ, ಬೇರೆ ದಾರಿಯಿಲ್ಲದ ಕಾರಣ ಅವರು ಕಾಲ್ನಡಿಗೆಯಲ್ಲೇ ಮನೆಗೆ ಹಿಂತಿರುಗಲು ನಿರ್ಧರಿಸಿದರು. 4 ಕಿ.ಮೀ. ನಡೆದ ಬಳಿಕ ಪೊಲೀಸರು ಆಟೋರಿಕ್ಷಾ ವ್ಯವಸ್ಥೆ ಮಾಡಿಕೊಟ್ಟರು. ಆದರೆ, ಆಟೋ ಡ್ರೈವರ್ ಅವರನ್ನು ಅರ್ಧದಲ್ಲೇ ಇಳಿಸಿದ ಕಾರಣ ಅವರು ಉಳಿದ 3 ಕಿ.ಮೀ. ಪ್ರಯಾಣವನ್ನು ಮತ್ತೆ ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಯಿತು.
ಬಳಿಕ ಮಹಿಳೆಯನ್ನು ಪಾಲ್ಘರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ನಾಗರಿಕರು ರಕ್ತದಾನ ಮಾಡಿದ ಕಾರಣ ವೈದ್ಯರು ಬಾಣಂತಿಗೆ ಸೂಕ್ತ ಚಿಕಿತ್ಸೆ ನೀಡಿದರು. ಇದೀಗ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.