ಮುಂಬೈ: ಪತ್ನಿ ಹಸೀನ್ ಜಹಾನ್ ವಿರುದ್ಧದ ವರದಕ್ಷಿಣೆ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಶಮಿ ವಿರುದ್ಧ ದೂರು ದಾಖಲು ಆಗಿದೆ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಸ್ ವಿಚಾರಣೆ ನಡೆಸಿದ ಕೋಲ್ಕತ್ತಾ ಕೋರ್ಟ್, ಮೊಹಮ್ಮದ್ ಶಮಿ ಸರೆಂಡರ್ ಆಗಲು ಅಥವಾ ಜಾಮೀನು ಪಡೆಯಲು ಕೇವಲ 15 ದಿನಗಳ ಕಾಲಾವಕಾಶ ನೀಡಿದೆ.
![Mohammed Shami](https://etvbharatimages.akamaized.net/etvbharat/prod-images/768-512-3694069-thumbnail-3x2-wdfd_0309newsroom_1567471711_328.jpg)
ಕೋಲ್ಕತ್ತಾ ಪೊಲೀಸರು ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರ ದೂರಿನ ಹಿನ್ನೆಲೆ ಶಮಿ ವಿರುದ್ಧ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 354ಎ (ಲೈಂಗಿಕ ದೌರ್ಜನ್ಯ) ವಿಭಾಗದಡಿಯಲ್ಲಿ ಚಾರ್ಜ್ ಶೀಟ್ ದಾಖಲಿಸಿದ್ದರು.
ಸದ್ಯ ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿದ್ದು, ಚಾರ್ಜ್ಶಿಟ್ ನೋಡುವವರೆಗೂ ತಾವೂ ಶಮಿ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದೆ. ಕೇವಲ ಅರೆಸ್ಟ್ ವಾರಂಟ್ ಜಾರಿಯಾದ ತಕ್ಷಣ ಓರ್ವ ಪ್ಲೇಯರ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿರುವ ಬಿಸಿಸಿಐ, ಎಲ್ಲ ರೀತಿಯಿಂದಲೂ ಇದರ ಮಾಹಿತಿ ಪಡೆದುಕೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಈ ಹಿಂದೆ ಕೂಡ ಗಂಡನ ವಿರುದ್ಧ ಹಸೀನ್ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು. ಆದರೆ ಇದಕ್ಕೆ ಯಾವುದೇ ರೀತಿಯ ಪುರಾವೆಗಳು ಇಲ್ಲದ ಕಾರಣ ಬಿಸಿಸಿಐ ಪ್ರಕರಣವನ್ನ ತಳ್ಳಿ ಹಾಕಿತ್ತು. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ಶಮಿ, ಮುಂದಿನ ಎರಡು ದಿನಗಳಲ್ಲಿ ಭಾರತಕ್ಕೆ ವಾಪಸ್ ಆಗಲಿದ್ದಾರೆ.