ನವದೆಹಲಿ: ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ತೆರಿಗೆ ಮಂಡಳಿಯ 37ನೇ ಕೌನ್ಸಿಲ್ ಸಭೆ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಗೋವಾದಲ್ಲಿ ನಡೆಯುತ್ತಿದ್ದು, ಉದ್ಯಮ ವಲಯವು ತೆರಿಗೆ ದರ ಕಡಿತದ ನಿರೀಕ್ಷೆಯಲ್ಲಿದೆ.
ತೆರಿಗೆ ದರ ಕಡಿತದ ಬೇಡಿಕೆಯ ಮಧ್ಯೆ, ದೇಶದ ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕ ಬೆಳವಣಿಗೆ ವೇಗ ಸುಧಾರಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಸಭೆ ಇಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ. ಈಗಾಗಲೇ ದೇಶದ ಆರ್ಥಿಕ ಪ್ರಗತಿ ಕುಸಿತ ಕಂಡಿದ್ದು, ಒಂದು ವೇಳೆ ತೆರಿಗೆ ಕಡಿತಗೊಳಿಸಿದ್ದಲ್ಲಿ ಗ್ರಾಹಕರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಲಿದೆ. ಇದರಿಂದ ಆರ್ಥಿಕತೆ ಚೇತರಿಕೆ ಸಾಧ್ಯವಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.
![nirmala](https://etvbharatimages.akamaized.net/etvbharat/prod-images/4497710_nirmalasi.jpg)
ಇನ್ನು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರು ವರ್ಷಗಳಲ್ಲೇ ಇದೇ ಮೊದಲ ಬಾರಿ ದೇಶದ ಆರ್ಥಿಕ ಪ್ರಗತಿ ಕನಿಷ್ಠ ಶೆ 5ಕ್ಕೆ ಕುಸಿದಿದೆ. ಈ ಹಿನ್ನೆಲೆ ವಿವಿಧ ಕ್ಷೇತ್ರಗಳಲ್ಲಿ ತೆರೆಗೆ ಕಡಿತಗೊಳಿಸುವ ಕುರಿತು ಸಭೆಯಲ್ಲಿ ಬೇಡಿಕೆಗಳ ಮಹಾಪೂರವೇ ಹರಿದು ಬಂದಿದೆ. ಬಿಸ್ಕತ್ ತಯಾರಿಕಾ ಉದ್ಯಮಗಳು, ಆಟೋಮೊಬೈಲ್ ಉದ್ಯಮ, ಎಫ್ಎಂಸಿಜಿ ಹಾಗೂ ಹೋಟೆಲ್ ಉದ್ಯಮಗಳು ಜಿಎಸ್ಟಿ ದರವನ್ನು ಇನ್ನಷ್ಟು ಕಡಿಮೆ ಮಾಡುವ ಬೇಡಿಕೆ ಇಟ್ಟಿವೆ.
![nirmala](https://etvbharatimages.akamaized.net/etvbharat/prod-images/4497710_carcar.jpg)
ಆದಾಯವು ನಿರೀಕ್ಷಿತ ಬೆಳವಣಿಗೆಯ ದರಕ್ಕಿಂತ ಕಡಿಮೆಯಿದ್ದರೆ ಜಿಎಸ್ಟಿ ಕಾಯ್ದೆಯಡಿ ರಾಜ್ಯಗಳಿಗೆ ಪರಿಹಾರ ನೀಡಲು ಬಳಸಲಾಗುತ್ತದೆ. ಆದಾಗ್ಯೂ, ಈ ಹಂತದಲ್ಲಿ ಜಿಎಸ್ಟಿ ದರ ಕಡಿತವನ್ನು ಪರಿಹಾರ ಸೆಸ್ ಫಂಡ್ ಆಗಿ ಅನುಮತಿಸುವುದು ತೆರಿಗೆ ವಿವೇಕಯುತವಲ್ಲ ಎಂದು ಅನೇಕ ರಾಜ್ಯಗಳು ಅಭಿಪ್ರಾಯಪಟ್ಟಿವೆ.
ಮೂಲಗಳ ಪ್ರಕಾರ ಕೇಂದ್ರ ಹಾಗೂ ರಾಜ್ಯಗಳ ಕಂದಾಯ ಅಧಿಕಾರಗಳನ್ನೊಳಗೊಂಡ ಜಿಎಸ್ಟಿಯ ಫಿಟ್ಮೆಂಟ್ ಕಮಿಟಿಯು ಈಗಾಗಲೇ ಬಿಸ್ಕತ್ನಿಂದ ಹಿಡಿದು ಕಾರ್ ವರೆಗಿನ ಉದ್ಯಮಗಳ ಮೇಲಿನ ತೆರಿಗೆ ದರ ಕಡಿತಗೊಳಿಸುವ ಬೇಡಿಕೆಗಳನ್ನು ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.ಇಂದಿನ ಸಭೆಯಲ್ಲಿ ಮರಳು ಗಣಿಗಾರಿಕೆ, ಇಟ್ಟಿಗೆ ತಯಾರಿಕಾ ಫ್ಯಾಕ್ಟರಿಗಳು, ಹಾಗೂ ಕಲ್ಲು ಪೂರೈಸುವ ಕ್ರಷರ್ ಗಳ ತೆರಿಗೆದಾರರ ವಿಶೇಷ ಸಂಯೋಜನೆ ಕುರಿತು ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಹೊಸ ಕೆಂದ್ರಾಡಳಿತ ಪ್ರದೇಶಗಳಾಗಿ ರಚಿಸಲು ಅನುಕೂಲವಾಗುವಂತೆ ಜಿಎಸ್ಟಿ ಕಾನೂನುಗಳಲ್ಲಿನ ತಿದ್ದುಪಡಿಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ ಮತ್ತು ಚಿನ್ನ ಮತ್ತು ಬೆಲೆಬಾಳುವ ಕಲ್ಲುಗಳ ಉದ್ಯಮಗಳಲ್ಲಿ ಇ-ವೇ ಬಿಲ್ ವ್ಯವಸ್ಥೆ ಪರಿಚಯಿಸುವ ಬಗ್ಗೆ ಕೇರಳ ಮುಂದಿಟ್ಟಿರುವ ಪ್ರಸ್ತಾಪದ ಬಗ್ಗೆಯೂ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
![nirmala](https://etvbharatimages.akamaized.net/etvbharat/prod-images/4497710_nirma.jpg)
ಇನ್ನೂ ಹೊಸ ಜಿಎಸ್‌ಟಿ ನೋಂದಣಿಯನ್ನು ಆಧಾರ್‌ನೊಂದಿಗೆ ಜೋಡಿಸುವ ಪ್ರಸ್ತಾಪದ ಕುರಿತು ಚರ್ಚಿಸುವ ಸಾಧ್ಯತೆಯಿದೆ ಮತ್ತು ರಾಷ್ಟ್ರೀಯ ಲಾಭಕೋರತನ ತಡೆ ವಿರೋಧಿ ಪ್ರಾಧಿಕಾರದಲ್ಲಿ (ಎನ್‌ಎಎ) ಪ್ರಕರಣಗಳ ತ್ರೈಮಾಸಿಕ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಿಎಸ್ಟಿ ಸಭೆಗೂ ಮುನ್ನ ವರದಿ ಸಲ್ಲಿಸಲಿರುವ ಫಿಟ್ಮೆಂಟ್ ಸಮಿತಿ ಹೊಟೇಲ್ ಉದ್ಯಮ ಕ್ಷೇತ್ರಕ್ಕೆ ಸಿಹಿಸುದ್ದಿ ನೀಡುವ ಸಾಧ್ಯತೆ ಇದೆ. ಪ್ರಸ್ತುತ ಒಂದು ರಾತ್ರಿಗೆ ಕೊಠಡಿ ತೆರಿಗೆ ದರ 75000 ರೂ ಗೆ ಶೇ. 18 ರಷ್ಟು ಜಿಎಸ್ಟಿ ಇದ್ದು, ಇನ್ಮುಂದೆ ಕೊಠಡಿ ತೆರಿಗೆ ದರವನ್ನು ಪ್ರತಿ ರಾತ್ರಿಗೆ 12,000 ಕ್ಕೂ ಶೇ18 ಜಿಎಸ್ಟಿ ವಿಧಿಸುವ ಸಾಧ್ಯತೆ ಇದೆ.
ಇನ್ನು ಟೆಲಿಕಾಂ ಸೇವೆಗಳ ಮೇಲಿನ ಜಿಎಸ್ಟಿ ದರವನ್ನು ಪ್ರಸ್ತುತ ಶೇ18 ರಿಂದ ಶೇ.12ಕ್ಕೆ ಇಳಿಸುವಂತೆ ಟೆಲಿಕಾಂ ಸಚಿವಾಲಯ ಮಾಡಿದ್ದ ಪ್ರಸ್ತಾಪವನ್ನೂ ಸಮಿತಿ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಸ್ಕತ್ತುಗಳು, ಬೇಕರಿ ಉತ್ಪನ್ನಗಳು, ಉಪಾಹಾರ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳು, ಮಿನರಲ್ ವಾಟರ್, ಸಿದ್ಧ ಪ್ಯಾಕೇಜ್ ತಿನಿಸುಗಳು ಇತರ ಆಹಾರ ಉತ್ಪನ್ನಗಳಿಗೆ ಪ್ರಸ್ತುತ ಜಿಎಸ್ಟಿ ರಚನೆಯೊಂದಿಗೆ ಯಾವುದೇ ಬದಲಾವಣೆ ಮಾಡದಿರಲು ಸಹ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಹಡಗುಯಾನ ಟಿಕೆಟ್ ಮೇಲಿನ ಜಿಎಸ್ಟಿ ದರವನ್ನು ಕಡಿತಗೊಳಿಸುವ ಕುರಿತು ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಕೂಡ ಸಮಿತಿ ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಆದಾಯ ತೆರಿಗೆ ಕುರಿತ 2019-20 ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜೊತೆಗೆ ಕಾರ್ಪೋರೆಟ್ ತೆರಿಗೆಗಳನ್ನು ಇಳಿಸುವ ನಿರೀಕ್ಷೆ ಹೊಂದಲಾಗಿದೆ.
ಒಟ್ಟಾರೆ, ದೇಶದ ಆರ್ಥಿಕ ಪ್ರಗತಿ ದೃಷ್ಟಿಯಲ್ಲಿಟ್ಟುಕೊಂಡು ಇಂದಿನ ಜಿಎಸ್ಟಿ ಮಂಡಳಿ ಸಭೆ ಯಾವೆಲ್ಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.