ನವದೆಹಲಿ: ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳು ತಮ್ಮ ಮರಣದಂಡನೆಯನ್ನು ವಿಳಂಬಗೊಳಿಸುವ ಮೂಲಕ ಕಾನೂನಿನ ಆದೇಶವನ್ನು ನಿರ್ಲಕ್ಷ್ಯ ಮಾಡುವ ಉದ್ದೇಶಪೂರ್ವಕ ಆಲೋಚನೆ ಮಾಡುತ್ತಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಗಲ್ಲು ಶಿಕ್ಷೆ ವಿಳಂಬವಾಗುತ್ತಿರುವ ಹಿನ್ನೆಲೆ ಈ ಬಗ್ಗೆ ವಿಚಾರಣೆ ನಡೆಸಲಾಯಿತು. ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಮೆಹ್ತಾ, ನಿರ್ಭಯಾ ಅಪರಾಧಿಗಳು ಕಾನೂನಿನ ಆದೇಶವನ್ನು ನಿರಾಶೆಗೊಳಿಸಲು ಉದ್ದೇಶಪೂರ್ವಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೈಕೋರ್ಟ್‌ಗೆ ಹೇಳಿದರು.
ಶಿಕ್ಷೆಗೆ ಒಳಗಾಗಿರುವ ಅಪರಾಧಿ ಕ್ಯುರೇಟಿವ್ ಅರ್ಜಿ ಮತ್ತು ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ ಎನ್ನುವ ಕಾರಣ ನೀಡಿದ್ದಾನೆ. ಇದು ಮರಣದಂಡನೆಯನ್ನು ನಿಧಾನಗೊಳಿಸಲು ಬಳಸುತ್ತಿರುವ ತಂತ್ರವಾಗಿದೆ. ನಿರ್ಭಯಾ ಪ್ರಕರಣದ ಈ ನಾಲ್ಕು ಆರೋಪಿಗಳು ನ್ಯಾಯಾಂಗವನ್ನು ಬಳಕೆ ಮಾಡಿಕೊಂಡು ಆಟವಾಡುತ್ತಿದ್ದಾರೆ ಮತ್ತು ದೇಶದ ಜನರ ತಾಳ್ಮೆಯನ್ನು ಕೆಣಕುತ್ತಿದ್ದಾರೆ ಎಂದು ಮೆಹ್ತಾ ಹೇಳಿದ್ದಾರೆ.
ಅಕ್ಷಯ್ ಸಿಂಗ್ (31), ವಿನಯ್ ಶರ್ಮಾ (26) ಮತ್ತು ಪವನ್ ಗುಪ್ತಾ (25) ಪರ ವಕೀಲ ಎ ಪಿ ಸಿಂಗ್, ವಾದ ಮಂಡನೆ ಮಾಡಿದ್ದು, ಮರಣದಂಡನೆ ಶಿಕ್ಷೆ ವಿಧಿಸುವುದನ್ನು ತಡೆಹಿಡಿಯಬೇಕೆಂದು ಹೇಳಿದ್ದಾರೆ. ಅಲ್ಲದೆ, ಕೇಂದ್ರದ ಮನವಿಯನ್ನು ವಿರೋಧಿಸಿದ್ದಾರೆ.
ಇನ್ನು ನಾಲ್ಕನೇ ಅಪರಾಧಿ ಮುಖೇಶ್ ಕುಮಾರ್ (32)ಪರ ವಾದ ಮಾಡುತ್ತಿರುವ ಹಿರಿಯ ವಕೀಲೆ ರೆಬೆಕಾ ಜಾನ್, ಕೇಂದ್ರದ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದುವರೆದು ಮಾತನಾಡಿರುವ ಅವರು, ಕೇಂದ್ರವು ಕೆಲವು ದಿನಗಳ ಹಿಂದಿನಿಂದ ಮಾತ್ರ ಎಚ್ಚರಗೊಂಡಿದೆ. ಈ ವಿಚಾರಣೆಯಲ್ಲಿ ಕೇಂದ್ರ ಪಕ್ಷವಲ್ಲ ಎಂದಿದ್ದಾರೆ.
ಸಂತ್ರಸ್ತೆ ಪೋಷಕರು ಅಪರಾಧಿಗಳ ವಿರುದ್ಧ ಡೆತ್ ವಾರಂಟ್ ಹೊರಡಿಸಬೇಕೆಂದು ವಿಚಾರಣಾ ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ತಕ್ಷಣವೇ ಡೆತ್ ವಾರಂಟ್ ಹೊರಡಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೋಗಿಲ್ಲ ಎಂದು ವಾದ ಮಂಡನೆ ಮಾಡಿದರು.
ಅಪರಾಧಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಬಹುದೇ ಎಂಬ ಬಗ್ಗೆ ಸ್ಪಷ್ಟನೆ ಕೋರಿ ಕೇಂದ್ರವು ಸುಪ್ರೀಂಕೋರ್ಟ್‌ನಲ್ಲಿ ಮನವಿಯನ್ನು ಸಲ್ಲಿಸಿದೆ. ಈ ಅರ್ಜಿ ಸುಪ್ರೀಂಕೋರ್ಟ್‌ನ ಮುಂದೆ ಬಾಕಿ ಇದೆ ಎಂದು ಜಾನ್ ಹೈಕೋರ್ಟ್‌ಗೆ ತಿಳಿಸಿದರು.
23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯನ್ನು 2012 ರ ಡಿಸೆಂಬರ್ 16-17ರ ಮಧ್ಯರಾತ್ರಿ ದಕ್ಷಿಣ ದೆಹಲಿಯಲ್ಲಿ ಬಸ್ನ ಒಳಗೆಯೇ ಆರು ಜನರು ಅತ್ಯಾಚಾರ ಮಾಡಿ ಕ್ರೂರವಾಗಿ ಹಲ್ಲೆ ಮಾಡಿದ್ದರು. ಇದಾದ ನಂತರ ಸಂತ್ರಸ್ತೆಯನ್ನು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29, 2012 ರಂದು ನಿಧನರಾಗಿದ್ದರು.
ಈ ಪ್ರಕರಣದ ಆರು ಆರೋಪಿಗಳಲ್ಲಿ ಒಬ್ಬನಾದ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಬಾಲಾಪರಾಧಿಗೆ ಮೂರು ವರ್ಷ ಶಿಕ್ಷೆ ನೀಡಿದ ನಂತರ ಬಿಡುಗಡೆ ಮಾಡಲಾಗಿತ್ತು.