ನವದೆಹಲಿ: 17ನೇ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, 303 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದಕ್ಕೂ ಮೊದಲು ಎಂಟು ಬಾರಿ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳು 300ಕ್ಕೂ ಹೆಚ್ಚು ಸ್ಥಾನ ಗಳಿಸಿದ್ದವು.
1952ರಲ್ಲಿ ನಡೆದ ಸ್ವತಂತ್ರ ಭಾರತ ಮೊದಲ ಚುನಾವಣೆಯಲ್ಲಿ ಜವಹಾರ್ ಲಾಲ್ ನೆಹರು ನೇತೃತ್ವದ ಕಾಂಗ್ರೆಸ್ ಪಕ್ಷ 543 ಕ್ಷೇತ್ರಗಳ ಪೈಕಿ 398 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೊದಲ ಚುನಾವಣೆಯಲ್ಲೇ ತ್ರಿಶತಕ ಭಾರಿಸಿತ್ತು.
ನಂತರ ನಡೆದ 1957ರ ಚುನಾವಣೆಯಲ್ಲಿ 395 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿದ್ರೆ, 1962ರಲ್ಲಿ 394 ಕ್ಷೇತ್ರ ದಲ್ಲಿ ಕೈ ಅಭ್ಯರ್ಥಿಗಳು ಗೆಲುವು ಸಾಧಿಸಿದ್ರು.
ಇನ್ನು ಇಂದೀರಾ ಗಾಂಧಿ ನೇತೃತ್ವದಲ್ಲಿ ನಡೆದ 1967ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 303 ಕ್ಷೇತ್ರಗಳನ್ನ ಗೆದ್ದಿತ್ತು. 1971ರಲ್ಲೂ ಇಂದಿರಾ ನೇತೃತ್ವದಲ್ಲಿ ಕೈ ಪಕ್ಷ 372 ಕ್ಷೇತ್ರದಲ್ಲಿ ಜಯ ಸಾಧಿಸಿತ್ತು.
ತುರ್ತುಪರಿಸ್ಥಿತಿ ನಂತರ ಹುಟ್ಟಿಕೊಂಡ ಜನತಾ ಪಕ್ಷ 1977ರ ಲೋಕಸಭಾ ಚುನಾವಣೆಯಲ್ಲಿ 302 ಸ್ಥಾನವನ್ನ ಗಳಿಸುವ ಮೂಲಕ ಮೊದಲ ಬಾರಿ ಕಾಂಗ್ರಸೇತರ ಪಕ್ಷ ಅಧಿಕಾಕ್ಕೇರಿತು. ನಂತರ ನಡೆದ 1980ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 377 ಸ್ಥಾನ ಗಳಿಸಿತ್ತು.
ಇನ್ನು ಇಂದಿರಾ ಗಾಂಧಿ ಹತ್ಯೆ ನಂತರ ನಡೆದ 1984ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 426 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸಿದ್ರು.
ನಂತರ 1989 ರಿಂದ 2014ರ ವರೆಗೆ ಯಾವುದೇ ಒಂದು ಪಕ್ಷ ಪೂರ್ಣ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. 2014 ಮತ್ತು 2019ರ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ಪೂರ್ಣ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ.