ನವದೆಹಲಿ: ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಅಲ್ ಖೈದಾ ಸಂಚುಕೋರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ.
ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾನುವಾರ ಅಬ್ದುಲ್ ಮೊಮಿನ್ ಮೊಂಡಾಲ್ (32) ಎಂಬಾತನನ್ನು ಮುರ್ಷಿದಾಬಾದ್ ಜಿಲ್ಲೆಯ ರಾಣಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಜ್ರಾನಾ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ.
ಅಲ್ ಖೈದಾಗೆ ಸೇರಿದ 10ಕ್ಕೂ ಹೆಚ್ಚು ಮಂದಿ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದರು. ಸೆಪ್ಟೆಂಬರ್ 11ರಿಂದ ಈ ಕುರಿತು ತನಿಖೆ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸಂಚುಕೋರನ್ನು ಬಂಧಿಸಲಾಗಿದೆ.
ಈಗ ಬಂಧಿಸಲ್ಪಟ್ಟಿರುವ ಆರೋಪಿ ಅಬ್ದುಲ್ ಮೊಮಿನ್ ಮೊಂಡಾಲ್ ರಾಯಪುರ ದಾರುರ್ ಹುಡಾ ಇಸ್ಲಾಮಿಯಾ ಮದರಸಾದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ. ಈತನ ವಿರುದ್ಧ ತನಿಖೆ ನಡೆಸಿದಾಗ ಅಲ್ ಖೈದಾ ಕರೆದಿದ್ದ ಸರಣಿ ಸಭೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಮೊಮಿನ್ ಗುಂಪಿಗೆ ಹೊಸ ಸದಸ್ಯರನ್ನು ನೇಮಿಸಲು ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಆರೋಪಿಯ ವಸತಿ ಆವರಣದಲ್ಲಿ ಶೋಧ ನಡೆಸಲಾಗಿದ್ದು, ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೆ 11 ಆರೋಪಿಗಳನ್ನು ಬಂಧಿಸಲಾಗಿದ್ದು, ಮೊಮಿನ್ನನ್ನು ಮುರ್ಷಿದಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.