ಪಶ್ಚಿಮ ಬಂಗಾಳ: ಜಾರ್ಖಂಡ್‌ನ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಭಯೋತ್ಪಾದಕ ಸಂಘಟನೆ ಸಿಪಿಐನ (ಮಾವೋವಾದಿ) ಆಸ್ತಿ ವ್ಯವಸ್ಥಾಪಕರನ್ನು ಎನ್‌ಐಎ ತಂಡ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ನಿವಾಸಿ ಮನೋಜ್ ಚೌಧರಿ (48)ಯನ್ನು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಂಧಿಸಲಾಯಿತು. ಇದಲ್ಲದೇ ಸ್ಥಿರಾಸ್ತಿಗೆ ಸಂಬಂಧಿಸಿದ ವಹಿವಾಟುಗಳನ್ನು ತೋರಿಸುವ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧನದ ಬಳಿಕ ಆತನನ್ನು ರಾಂಚಿಯ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ಭಾರತದಲ್ಲಿ ನಿಷೇಧಿತ ಭಯೋತ್ಪಾದನಾ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಚೌಧರಿ, ಸಿಪಿಐ ಕಾರ್ಯಕರ್ತರು ಸಂಗ್ರಹಿಸಿದ್ದ ಹಾಗೂ ಸುಲಿಗೆ ಮಾಡಿದ್ದ ಆದಾಯವನ್ನು ಅಕ್ರಮವಾಗಿ ರಿಯಲ್ ಎಸ್ಟೇಟ್ ಸೇರಿದಂತೆ ಇತರ ಕಡೆ ಹೂಡಿಕೆ ಮಾಡುತ್ತಿದ್ದ ಎಂದು ಎನ್‌ಐಎ ತಿಳಿಸಿದೆ.
ಕಳೆದ ಮೂರು ವರ್ಷಗಳಿಂದ ಎನ್‌ಐಎ ತಂಡಕ್ಕೆ ಬೇಕಾಗಿದ್ದ ಈತ, 2008 ರಿಂದ ಮಾವೋವಾದಿಗಳ ಸಂಘನೆಯಲ್ಲಿ ತೊಡಗಿಸಿಕೊಂಡಿದ್ದ. ಇಲ್ಲಿನ ಗಿರಿದಿಹ್ ಪ್ರದೇಶದಲ್ಲಿ ಸೆರೆಸಿಕ್ಕ 15 ಮಂದಿ ಮಾವೋವಾದಿಗಳು ಹಾಗೂ ಅಕ್ರಮ ಬಂದೂಕು, ಮದ್ದುಗುಂಡುಗಳ ಪ್ರಕರಣಕ್ಕೂ ಈ ಪ್ರಕರಣಕ್ಕೂ ಸಂಬಂಧವಿದೆ ಎಂದು ಎನ್‌ಐಎ ತಿಳಿಸಿದೆ. ಇದಕ್ಕೂ ಮೊದಲು ಸಿಪಿಐನ ಸ್ಕ್ವಾಡ್ ಏರಿಯಾ ಕಮಿಟಿಯ ಸದಸ್ಯ ಸುನಿಲ್ ಮನ್ಜಿಯನ್ನು ಎನ್‌ಐಎ ಬಂಧಿಸಿತ್ತು.
ಅಕ್ರಮ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳ ಕಾಯ್ದೆ, ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆ ಮತ್ತು ಯುಎ (ಪಿ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿ 2008 ಮಾರ್ಚ್ನಲ್ಲೇ ಗಿರಿದಿಹ್ನ ಡುಮ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಎನ್‌ಐಎ ಪುನಃ ಮೇ 2008ರಲ್ಲಿ ಪ್ರಕರಣ ದಾಖಲಿಸಿದೆ.
ಇಷ್ಟೇ ಅಲ್ಲದೆ ತನಿಖೆಯ ವೇಳೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಮತ್ತು ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ. ಈವರೆಗೆ ಚೌಧರಿ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ ಎನ್‌ಐಎ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ.