ನವದೆಹಲಿ: ರಕ್ಷಣಾ ಕ್ಷೇತ್ರಕ್ಕೆ ಹೊಸ ಸುಧಾರಣಾ ಕ್ರಮಗಳನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಪ್ರಕಟಿಸಿದ್ದು, ಉದ್ಯಮದಲ್ಲಿ ಹೂಡಿಕೆ ಮಾಡುವವರು, ಸರ್ಕಾರದ ನಿರ್ಧಾರಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ದೊಡ್ಡ ಸುಧಾರಣಾ ಕ್ರಮದಲ್ಲಿ, ರಕ್ಷಣಾ ಉತ್ಪಾದನೆಗಾಗಿ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಮಿತಿಯನ್ನು ಸ್ವಯಂಚಾಲಿತ ಮಾರ್ಗದಲ್ಲಿ ಶೇಕಡಾ 49 ರಿಂದ 74ಕ್ಕೆ ಹೆಚ್ಚಿಸಲು ಕೇಂದ್ರ ನಿರ್ಧರಿಸಿದೆ.
ಈಟಿವಿ ಭಾರತ್ನೊಂದಿನ ಸಂವಾದದಲ್ಲಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ (ಡಿಆರ್‌ಡಿಒ) ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಈ ಸುಧಾರಣೆಗಳ ವಿಭಿನ್ನ ಅಂಶಗಳನ್ನು ಮತ್ತು ಅವು ಭಾರತಕ್ಕೆ ಹೇಗೆ ಪ್ರಯೋಜನಕಾರಿ ಎಂದು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹೇಗೆ ಸ್ವಾವಲಂಬಿಗಳಾಗುತ್ತವೆ ಎಂಬುದನ್ನು ತಿಳಿಸಿದ್ದಾರೆ.
ಸಂಭಾಷಣೆಯ ಮುಖ್ಯಾಂಶಗಳು ಇಲ್ಲಿವೆ:
- ಮುಂದಿನ ದಿನಗಳಲ್ಲಿ ಯಾವ ಉತ್ಪನ್ನಗಳನ್ನು ದೇಶಕ್ಕೆ ಆಮದು ಮಾಡಿಕೊಳ್ಳಲಾಗುವುದು ಎಂಬ ಬಗ್ಗೆ ಯಾವುದೇ ಪಟ್ಟಿ ಇಲ್ಲ. ಆದರೆ, ಶೀಘ್ರದಲ್ಲೇ ಇದನ್ನು ಸಿದ್ಧಪಡಿಸಬಹುದು. ಭಾರತವು ಕ್ರಮೇಣ ಕ್ಷಿಪಣಿಗಳು, ರೇಡಾರ್ ತಂತ್ರಜ್ಞಾನಗಳು ಮತ್ತು ಎಲೆಕ್ಟ್ರಾನಿಕ್ ಯುದ್ದೋಪಕರಣಗಳ ತಂತ್ರಜ್ಞಾನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂದರೆ ಮುಂಬರುವ ವರ್ಷಗಳಲ್ಲಿ ಇತರ ದೇಶಗಳಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬೇಕಾಗಿಲ್ಲ. ಸ್ಥಳೀಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಸವಾಲಿಗೆ ಭಾರತೀಯ ಕೈಗಾರಿಕೆಗಳು ಸಜ್ಜಾಗಿವೆ. ಇದು ಭಾರತದಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ ಮತ್ತು ಯಾವುದೇ ಸಮಯದಲ್ಲಿ, ದೇಶದಲ್ಲಿ ಎರಡು ಮತ್ತು ಮೂರು ಹಂತದ ಕೈಗಾರಿಕೆಗಳು ಇರುವುದಿಲ್ಲ ಎಂದಿದ್ದಾರೆ.
- ಭಾರತವು ಇತರ ದೇಶಗಳಿಂದ ಬಿಡಿಭಾಗಗಳನ್ನು ಖರೀದಿಸಲು ಸಾಕಷ್ಟು ಹಣವನ್ನು ಖರ್ಚು ಮಾಡುತ್ತದೆ. ಹೊಸ ಸುಧಾರಣೆಗಳೊಂದಿಗೆ, ಅದೇ ಹಣವನ್ನು ಅವುಗಳನ್ನು ಅಂತರ್ವರ್ಧಕವಾಗಿ ಅಭಿವೃದ್ಧಿಪಡಿಸಲು ಹೂಡಿಕೆ ಮಾಡಬಹುದು. ಇದು ಒಂದು ರೀತಿಯಲ್ಲಿ ಭಾರತೀಯ ಕೈಗಾರಿಕೆಗಳಿಗೆ ಹತೋಟಿ ನೀಡುತ್ತದೆ ಮತ್ತು ದೇಶಕ್ಕೆ ಸಾಕಷ್ಟು ವಿದೇಶಿ ವಿನಿಮಯವನ್ನು ತರುತ್ತದೆ. ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದಾಗ, ಕೈಗಾರಿಕಾ ವಲಯವು ಪೂರೈಕೆ ಸರಪಳಿಯಲ್ಲಿ ಯಾವುದೇ ತೊಂದರೆಯಿಲ್ಲದೇ ಅಭಿವೃದ್ಧಿ ಹೊಂದಲು ಪ್ರಾರಂಭಿಸುತ್ತದೆ. ಭಾರತ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಗಳಾಗುವ ಹಾದಿಯಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- ವಿದೇಶಿ ನೇರ ಹೂಡಿಕೆಯನ್ನು ಶೇಕಡಾ 74 ಕ್ಕೆ ಏರಿಸುವುದರಿಂದ ಭಾರತದಲ್ಲಿ ವಿದೇಶಿ ಹೂಡಿಕೆಗೆ ಬಾಗಿಲು ತೆರೆದಂತಾಗಿದೆ. ದೇಶದಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾದಷ್ಟೂ ರಕ್ಷಣಾ ತಂತ್ರಜ್ಞಾನಗಳ ವಿಷಯದಲ್ಲಿ ಭಾರತ ಹೆಚ್ಚು ಸ್ವಾವಲಂಬಿಯಾಗುತ್ತದೆ. ಸ್ಥಳೀಯ ಉತ್ಪಾದನೆಯು ಭಾರತದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುತ್ತದೆ. ಎಲ್ಲವೂ ಸರಿಯಾಗಿ ನಡೆದರೆ, ಕೆಲವೇ ವರ್ಷಗಳಲ್ಲಿ ಉತ್ಪನ್ನಗಳನ್ನು ಇತರ ದೇಶಗಳಿಗೆ ರಫ್ತು ಮಾಡಲು ಪ್ರಾರಂಭಿಸಬಹುದು ಎಂದು ಡಾ.ಜಿ.ಸತೀಶ್ ರೆಡ್ಡಿ ಹೇಳಿದ್ದಾರೆ.