ನವದೆಹಲಿ : ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕೆಲವು ಮಹತ್ವದ ದಾಖಲೆಗಳ ರವಾನೆ ಮತ್ತು ಸಂಗ್ರಹದ ಆರೋಪದ ಹಿನ್ನೆಲೆ ಪತ್ರಕರ್ತ ರಾಜೀವ್ ಶರ್ಮಾ ಎಂಬಾತನನ್ನು ಬಂಧಿಸಿಲಾಗಿತ್ತು.
ಈತನ ಬಂಧನದ ಬೆನ್ನಲ್ಲೇ ಇದೀಗ ಮತ್ತೆ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪತ್ರಕರ್ತ ರಾಜೀವ್ ಶರ್ಮಾ ಜೊತೆ ಒಡನಾಟ ಹೊಂದಿದ್ದ ಓರ್ವ ಚೀನಾ ವ್ಯಕ್ತಿ, ಮತ್ತೊಬ್ಬ ನೇಪಾಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ನಕಲಿ ಕಂಪನಿ ಖಾತೆಗಳ ಮೂಲಕ ಪತ್ರಕರ್ತ ರಾಜೀವ್ ಶರ್ಮಾಗೆ ಭಾರಿ ಮೊತ್ತದ ಹಣ ಪಾವತಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ದೆಹಲಿಯ ವಿಶೇಷ ಪೊಲೀಸ್ ಘಟಕ ಆರೋಪಿಗಳ ಫೋನ್, ಲ್ಯಾಪ್ಟಾಪ್ ಸೇರಿ ಇತರೆ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ.
ಪಿತಂಪುರದ ನಿವಾಸಿ ಪತ್ರಕರ್ತ ರಾಜೀವ್ ಶರ್ಮಾ ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕೆಲ ಮಹತ್ವದ ದಾಖಲೆಗಳನ್ನು ಹೊಂದಿದ್ದಕ್ಕೆ ಇವರನ್ನು ಪೊಲೀಸರು ಬಂಧಿಸಿದ್ದಾರೆ.
ಇದು ಬಹಳ ಸೂಕ್ಷ್ಮ ವಿಷಯ, ತನಿಖೆ ಪ್ರಗತಿಯಲ್ಲಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಗಲ್ಲ. ಸಮಯ ಬಂದಾಗ ಈ ಬಗ್ಗೆ ಇನ್ನಷ್ಟು ಮಾಹಿತಿ ತಮ್ಮೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ಇಲ್ಲಿನ ಉಪ ಪೊಲೀಸ್ ಆಯುಕ್ತ (ವಿಶೇಷ ಕೋಶ) ಸಂಜೀವ್ ಕುಮಾರ್ ಯಾದವ್ ಹೇಳಿದ್ದಾರೆ.