ಸೋಲಾಪುರ (ಮಹಾರಾಷ್ಟ್ರ): ಕೊರೊನಾ ಬಿಕ್ಕಟ್ಟಿನ ವೇಳೆ ಸಾರ್ವಜನಿಕರ 7 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಿಸಾನ್ ಸೇನೆ ಮತ್ತು ಜಲ ಸೇನೆಯು ಆಂದೋಲನವನ್ನು ನಡೆಸಿದೆ. ಈ ಆಂದೋಲನವು ಪ್ರಧಾನ ಮಂತ್ರಿ ಕಚೇರಿಗೆ 1 ಲಕ್ಷ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸುವುದಾಗಿದೆ.
ಈ ಆಂದೋಲನದ ನೇತೃತ್ವವನ್ನು ಕಿಸಾನ್ ಸೇನೆ ಮತ್ತು ಜಲಸೇನೆಯ ಮುಖಂಡ ಪ್ರಫುಲ್ ಕದಮ್ ವಹಿಸಿಕೊಂಡಿದ್ದು, ಜಿಲ್ಲೆಯ ಸಂಗೋಲಾ ಮತ್ತು ಪಂಡರ್ಪುರದ ರೈತರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಈಶಾನ್ಯ ರಾಜ್ಯಗಳು, ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತದ ಸಾವಿರಾರು ಜನರು ಪ್ರಧಾನಿ ಕಚೇರಿಗೆ ಕರೆ ಮಾಡಿದ್ದಾರೆ. ಬೇಡಿಕೆಗಳನ್ನು ಈಡೇರಿಸಲು ಮತ್ತು ಕೇಂದ್ರ ಸರ್ಕಾರವನ್ನು ಜಾಗೃತಗೊಳಿಸಲು ಈ ಆಂದೋಲನವನ್ನು ಆಯೋಜಿಸಲಾಗಿತ್ತು. ಅಷ್ಟೇ ಅಲ್ಲದೆ, ಕೊರೊನಾದಿಂದ ಗುಣಮುಖರಾಗುವ ಜನರಿಗೆ ಯಾವ ರೀತಿಯ ಔಷಧ ನೀಡಲಾಗಿದೆ ಎಂಬುದನ್ನು ಅಧಿಕೃತವಾಗಿ ಘೋಷಿಸಬೇಕು ಎಂದು ಕದಮ್ ಆಗ್ರಹಿಸಿದ್ದಾರೆ.
ಈ ಆಂದೋಲನದ ಸಮಯದಲ್ಲಿ, ಪ್ರಧಾನ ಮಂತ್ರಿಗಳ ಕಚೇರಿಗೆ ನಿರಂತರವಾಗಿ ದೇಶದ ನಾನಾ ಮೂಲೆಗಳಿಂದ ಅನೇಕ ಕರೆಗಳು ಬಂದಿದ್ದು, ಜನರ ಪ್ರಶ್ನೆಗಳಿಗೆ ಅಧಿಕಾರಿಗಳು ಮತ್ತು ನೌಕರರು ಉತ್ತರಿಸಿದ್ದಾರೆ.