ನವದೆಹಲಿ: ಜಗತ್ತಿನ ಆಗುಹೋಗುಗಳಿಗೆ ಎಲ್ಲಕ್ಕಿಂತ ವೇಗವಾಗಿ ಸ್ಪಂದಿದುವ ಅಗ್ರ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಇಂದು #cancelallBlueTicksinIndia ಎನ್ನುವ ಹ್ಯಾಶ್ಟ್ಯಾಗ್ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಕೇವಲ ಎರಡು ಟ್ವೀಟ್ ಮಾಡಿರುವ ಅಮಿತ್ ಶಾ ಪುತ್ರ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಬ್ಲೂ ಟಿಕ್ ನೀಡಿರುವುದು ಟ್ವಿಟರ್ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜಯ್ ಶಾಗೆ 10 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ. ಆದರೆ ಅಮಿತ್ ಶಾ ಪುತ್ರ ಎನ್ನುವ ಫ್ಯಾಕ್ಟರ್ ಇಲ್ಲಿ ಕೆಲಸ ಮಾಡಿದೆ ಎನ್ನುವುದು ನೆಟ್ಟಿಗರ ಆಕ್ರೋಶ.
ಜಯ್ ಶಾಗೆ ಬ್ಲೂ ಟಿಕ್ ನೀಡಿದ್ದು ಒಂದೆಡೆಯಾದರೆ, ಕೆಲ ಖ್ಯಾತನಾಮರಿಗೆ ಈ ಅಧಿಕೃತ ಮಾನ್ಯತೆ ನೀಡದಿರುವುದೂ ಇಲ್ಲಿ ಪ್ರಸ್ತಾಪವಾಗಿದೆ. ಬುಡಕಟ್ಟು ಸಮುದಾಯದ ದೊಡ್ಡ ಧ್ವನಿ ಹನ್ಸರಾಜ್ ಅವರ ಖಾತೆಗೆ ಬ್ಲೂ ಟಿಕ್ ನೀಡಬೇಕು ಎಂದು ಆಗ್ರಹಿಸಿದ್ದಾರೆ. ದಲಿತರಿಗೆ ಟ್ವಿಟರ್ ಅನ್ಯಾಯ ಎಸಗುತ್ತಿದೆ, ಅಧಿಕಾರಲ್ಲಿರುವ ಮೇಲ್ಜಾತಿಯವರಿಗೆ ಟ್ವಿಟರ್ ಅಧಿಕೃತ ಮಾನ್ಯತೆ ನೀಡುತ್ತಿದೆ ಎಂದು ಆರೋಪಿಸಿ ನೆಟ್ಟಿಗರು ಟ್ವಿಟರ್ ಇಂಡಿಯಾನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
#cancelallBlueTicksinIndia ಎನ್ನುವ ಹ್ಯಾಶ್ಟ್ಯಾಗ್ ಮೂಲಕ ಭಾರತದಲ್ಲಿ ಟ್ವಿಟರ್ ಸಂಸ್ಥೆ ಯಾವುದೇ ಬಳಕೆದಾರನಿಗೆ ಅಧಿಕೃತ ಮಾನ್ಯತೆ ನೀಡುವುದು ಬೇಡ ಎನ್ನುವ ಆಗ್ರಹ ಕೇಳಿಬಂದಿದೆ. ಭಾರತದಲ್ಲಿ ಈ ಟ್ರೆಂಡ್ ಅಗ್ರಸ್ಥಾನದಲ್ಲಿದ್ದರೆ, ವಿಶ್ವಾದ್ಯಂತ 30ನೇ ಸ್ಥಾನದಲ್ಲಿದೆ. ಈ ಬಗ್ಗೆ ಈವರೆಗೂ ಟ್ವಿಟರ್ ಸಂಸ್ಥೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.
ಬ್ಲೂ ಟಿಕ್ ಎಂದರೇನು..?
ಸರಳವಾಗಿ ಹೇಳಬೇಕೆಂದರೆ ನೀಲಿ ಬಣ್ಣದಲ್ಲಿರುವ ಟಿಕ್ ಮಾರ್ಕ್ ಇದಾಗಿದ್ದು, ಬಣ್ಣದ ಆಧಾರದಲ್ಲಿ ಈ ಹೆಸರು ಬಂದಿದೆ. ಎಲ್ಲ ಕ್ಷೇತ್ರದ ಖ್ಯಾತನಾಮರ ಟ್ವಿಟರ್ ಖಾತೆಗೆ ಟ್ವಿಟರ್ ಸಂಸ್ಥೆ ಅಧಿಕೃತ ಮಾನ್ಯತೆ ನೀಡುತ್ತದೆ. ಇದನ್ನೇ ಬ್ಲೂ ಟಿಕ್ ಎನ್ನುತ್ತಾರೆ. ಬ್ಲೂ ಟಿಕ್ ಎನ್ನುವುದ ಅಧಿಕೃತ ಎನ್ನುವುದರ ಸಂಕೇತ. ಖ್ಯಾತನಾಮರ ಹೆಸರಿನಲ್ಲಿ ಹತ್ತಾರು ಖಾತೆಗಳು ತೆರೆಯುವುದರಿಂದ ಅವುಗಳ ಮಧ್ಯೆ ಬ್ಲೂ ಟಿಕ್ ಹೊಂದಿದ ಖಾತೆ ಭಿನ್ನವಾಗಿ ಕಾಣಿಸುತ್ತದೆ.