ಗಡ್ಚಿರೋಲಿ(ಮಹಾರಾಷ್ಟ್ರ): ಛತ್ತೀಸ್ಗಡ್-ಮಹಾರಾಷ್ಟ್ರ ಗಡಿಯಲ್ಲಿರುವ ಗಡ್ಚಿರೋಲಿ ಜಿಲ್ಲೆಯಲ್ಲಿ ನಕ್ಸಲರು ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ.
ತಮ್ಮ ಸಹಚರ ಮಹಿಳೆಯೊಬ್ಬಳನ್ನು ಪೊಲೀಸರು ಬೇಟೆಯಾಡಿರುವ ಬೆನ್ನಲ್ಲೇ ನಕ್ಸಲರು ಈ ದುಷ್ಕೃತ್ಯ ಎಸಗಿದ್ದಾರೆ. ಸಾವರ್ಗಾಂವ್ - ಮುರುಮ್ಗಾಂವ್ ರಸ್ತೆಯಲ್ಲಿ ಈ ದಾಳಿ ನಡೆಸಿದ್ದಾರೆ ಎಂದು ಗಡ್ಚಿರೋಲಿ ಎಸ್ಪಿ ಮಾಹಿತಿ ನೀಡಿದ್ದಾರೆ. ಈ ಬಂಡುಕೋರರು ಧನೋರಾ ತಾಲೂಕಿನ ರಸ್ತೆ ಬಂದ್ ಮಾಡಿದ್ದರು. ಈ ವೇಳೆ ನಾಲ್ಕು ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ.
ನಕ್ಸಲ್ ಗುಂಪಿನಲ್ಲಿದ್ದ ಕುಖ್ಯಾತ ಮಹಿಳೆ ಸ್ರುಜನಕ್ಕ ಎಂಬುವಳನ್ನು ಮೇ 1 ರಂದು ಪೊಲೀಸರು ಕಾರ್ಯಾಚರಣೆ ವೇಳೆ ಹೊಡೆದುರುಳಿಸಿದ್ದರು. ಈಕೆಯ ವಿರುದ್ಧ 34 ಆದಿವಾಸಿಗಳನ್ನು ಕೊಂದಿರುವ ಪ್ರಕರಣ ಸೇರಿದಂತೆ ಒಟ್ಟು 155 ಕೇಸ್ಗಳು ದಾಖಲಾಗಿದ್ದವು.
ಭಾನುವಾರ ನಡೆದಿದ್ದ ಎನ್ಕೌಂಟರ್ನಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದರು. ಅಲ್ಲದೆ, ಹಲವರು ಗಾಯಗೊಂಡಿದ್ದರು.