ಜೈಪುರ: ನವದೆಹಲಿಯ ಜವಹಾರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 82 ವಿದ್ಯಾರ್ಥಿಗಳ ರಾಷ್ಟ್ರೀಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬುದು ಆರ್ಟಿಐ ಮೂಲಕ ಕೇಳಲಾದ ಪ್ರಶ್ನೆಯಿಂದ ಬಹಿರಂಗವಾಗಿದೆ.
2019-20ರ ಮಾನ್ಸೂನ್ ಮತ್ತು ಚಳಿಗಾಲದ ಅವಧಿಗೆ ನೋಂದಾಯಿತರಾಗಿರುವ 82 ವಿದೇಶಿ ವಿದ್ಯಾರ್ಥಿಗಳ ರಾಷ್ಟ್ರೀಯತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಆರ್ಟಿಐ ಕಾರ್ಯಕರ್ತ ಸುಧೀರ್ ಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಕೋರಿ ಜನವರಿ 1ರಂದು ಆರ್ಟಿಐ ಅಡಿಯಲ್ಲಿ ಅರ್ಜಿ ಹಾಕಲಾಗಿತ್ತು. ಇದೀಗ ಮಾಹಿತಿ ದೊರೆತಿದ್ದು, ಆದಷ್ಟು ಶೀಘ್ರದಲ್ಲೇ ಪ್ರಧಾನಮತ್ರಿ ಮತ್ತು ಗೃಹ ಸಚಿವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಹೇಳುತ್ತೇನೆ ಎಂದಿದ್ದಾರೆ.
ಒಂದು ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನ ದಾಖಲು ಮಾಡಿಕೊಳ್ಳುವಾಗ ಇಷ್ಟೊಂದು ಬೇಜವಾಬ್ದಾರಿತನ ತೋರಿದರೆ ಹೇಗೆ? ಇದರ ಬಗ್ಗೆ ಸೂಕ್ತ ತನಿಖೆಯಾಗಲೇಬೇಕು. ಈ ಬಗ್ಗೆ ಸರ್ಕಾರ ಮತ್ತು ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡುವ ಕುರಿತು ವಕೀಲರೊಂದಿಗೆ ಮಾತನಾಡುತ್ತಿದ್ದೇನೆ ಎಂದಿದ್ದಾರೆ.
ಆರ್ಟಿಐನಿಂದ ಸಿಕ್ಕಿರುವ ಮಾಹಿತಿ ಪ್ರಕಾರ 44 ವಿವಿಧ ಕೋರ್ಸ್ಗಳಿಗೆ 301 ವಿದೇಶಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಅದರಲ್ಲಿ ಕೊರಿಯಾದಿಂದ 35 ವಿದ್ಯಾರ್ಥಿಗಳು, ನೇಪಾಳದ 25, ಬಾಂಗ್ಲಾದಿಂದ 7, ಸಿರಿಯಾದಿಂದ 7, ಚೀನಾ 24, ಅಪ್ಘಾನಿಸ್ತಾನದ 21, ಜರ್ಮನಿಯ 13 ಮತ್ತು ಅಮೆರಿಕದ 10 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.