ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆನ್‌ಲೈನ್ ಗ್ಯಾಂಬ್ಲಿಂಗ್ ಮೂಲಕ 24 ವರ್ಷದ ಯುವಕನೊಬ್ಬ ತನ್ನ ತಂದೆಯ ಖಾತೆಯಿಂದ 10.50 ಲಕ್ಷ ರೂ. ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕ್ಕಿ ಸಲೆಕ್‌ಪಾಲ್ ಧಿಂಗನ್ ಎಂಬ ಯುವಕ ವಂಚನೆ ಎಸಗಿದವ. ಆನ್‌ಲೈನ್ ವಹಿವಾಟಿನ ಮೂಲಕ ತನ್ನ ಬ್ಯಾಂಕ್ ಖಾತೆಯಿಂದ ಹಣ ಕಳ್ಳತನವಾಗಿದೆ ಎಂದು ಸೈಬರ್ ಪೊಲೀಸರಿಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಹಣ ಕಳೆದುಕೊಂಡಿದ್ದರಿಂದ ಮನೆಯವರಿಗೆ ಹೆದರಿ ಆನ್‌ಲೈನ್ ಮೂಲಕ ಹಣ ಕಳ್ಳತನ ವಾಗಿದೆ ಎಂದು ವಂಚಕನೇ ಪೊಲೀಸರಿಗೆ ದೂರು ನೀಡಿದ್ದಾನೆ. ಕೆಲವೇ ಗಂಟೆಗಳಲ್ಲಿ ದೂರುದಾರನೇ ವಂಚಕನಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ವಿಕ್ಕಿಯ ತಂದೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ತನ್ನ ಜಮೀನು ಮಾರಿ ನಾಸಿಕ್‌ನಲ್ಲಿ ಫ್ಲ್ಯಾಟ್ ಖರೀದಿಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ 18,59,040 ರೂ. ಠೇವಣಿ ಇಟ್ಟಿದ್ದರು. ವಿಕ್ಕಿಯ ಮೊಬೈಲ್ ನಂಬರ್ ಆ ಬ್ಯಾಂಕ್ ಖಾತೆಗೆ ಲಿಂಕ್ ಆಗಿತ್ತು. ಮೇ ತಿಂಗಳಲ್ಲಿ ಬ್ಯಾಂಕ್ ವಹಿವಾಟಿನಲ್ಲಿ ಖಾತೆಯಿಂದ 10.50 ಲಕ್ಷ ರೂ. ವಿತ್ಡ್ರಾ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆನ್‌ಲೈನ್ ವಂಚಕರು ತಮ್ಮ ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ್ದಾರೆ ಎಂದು ಆರೋಪಿಸಿ ವಿಕ್ಕಿಯ, ಸೈಬರ್ ಪೊಲೀಸರಿಗೆ ದೂರು ನೀಡಿದ್ದ ಎಂದು ಸೈಬರ್ ಅಪರಾಧ ಪೊಲೀಸ್ ಅಧಿಕಾರಿ ದೇವರಾಜ್ ಬೋರ್ಸ್ ಮಾಹಿತಿ ನೀಡಿದ್ದಾರೆ.
ವಿಕ್ಕಿ ಆನ್‌ಲೈನ್ ಗ್ಯಾಂಬ್ಲಿಂಗ್ ನಡೆಸುತ್ತಿದ್ದ. ಅವನು ರಮ್ಮಿ ಆಟವೊಂದರಲ್ಲಿ ತನ್ನ ತಂದೆಯ ಬ್ಯಾಂಕ್ ಖಾತೆಯಿಂದ 10.5 ಲಕ್ಷ ರೂ. ಸೋತಿದ್ದಾನೆ. ಇದನ್ನು ಮರೆಮಾಚಲು ಸುಳ್ಳು ವಂಚನೆಯ ನಾಟಕವಾಡಿದ್ದಾನೆ ಎಂದರು.
ಮಗನ ವಂಚನೆ ಬಗ್ಗೆ ತಿಳಿಯುತ್ತಿದ್ದಂತೆ ವಿಕ್ಕಿಯ ತಂದೆ ಸಕೆಲ್‌ಪಾಲ್ ಧಿಂಗನ್ ಅವರಿಗೆ ಹೃದಯಾಘಾತವಾಗಿದ್ದು, ಸದ್ಯ ನಾಸಿಕ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.