ಹೈದರಾಬಾದ್: ತಾಂಜಿಮ್ ಇಸ್ಲಾಮಿಕ್ ಮುಜಾಹಿದ್ದೀನ್ ಎಂದು ಕರೆಯಲ್ಪಡುವ ಉಗ್ರ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಉಗ್ರ ತುಂಡಾ ವಿರುದ್ಧ ಇಂದು ನ್ಯಾಯಾಲಯ ಆದೇಶ ಪ್ರಕಟ ಮಾಡಲಿದೆ.
ಬಾಬ್ರಿ ಧ್ವಂಸಕ್ಕೆ ಪ್ರತೀಕಾರವಾಗಿ ಈತ ದೇಶಾದ್ಯಂತ ಸ್ಫೋಟಿಸಲು ಸಂಚು ರೂಪಿಸಿದ್ದ. ಅಲ್ಲದೆ, ಇದಕ್ಕೆ ಸಹಾಯಕನಾಗಿ ಜಲಿಸ್ ಅನ್ಸಾರಿ, ತುಂಡಾನ ಜೊತೆಯಾಗಿದ್ದ.
ಅಬ್ದುಲ್ ಕರೀಮ್ ತುಂಡಾ 1993 ರ ಸರಣಿ ಸ್ಫೋಟದಲ್ಲಿ ಸಂಚು ಹೂಡಿದ ಪ್ರಕರಣ ಹಾಗೂ ಸಿಕಿಂದರಾಬಾದ್ ರೈಲ್ವೆ ನಿಲ್ದಾಣ, ಹುಮಾಯನ್ ನಗರದಲ್ಲಿ ಬಾಂಬ್ ಹಾಕಿದ್ದ ಪ್ರಕರಣ ಇವನ ಮೇಲಿದೆ.
ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ತುಂಡಾ, ಬಾಂಬ್ ತಯಾರಿಸುವಲ್ಲಿ ವಿಶೇಷ ಪರಿಣತಿ ಸಾಧಿಸಿದ್ದಾನೆ. ಹಲವಾರು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ 20 ಪ್ರಮುಖ ಭಯೋತ್ಪಾದಕರಲ್ಲಿ ಈತನೂ ಒಬ್ಬ.
ಈತನನ್ನು ದೆಹಲಿ ಪೊಲೀಸರು ಭಾರತ-ನೇಪಾಳ ಗಡಿಯಲ್ಲಿ ಬಂಧಿಸಿದ್ದರು. ತುಂಡಾ ಬಂಧನವು, ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಭಾರತದ ಭದ್ರತಾ ಪಡೆಗಳಿಗೆ ಸಿಕ್ಕಿರುವ ಬಹುದೊಡ್ಡ ಯಶಸ್ಸು ಎಂದೇ ಕರೆಯಲಾಗಿತ್ತು.
ದೇಶದಾದ್ಯಂತ 40ಕ್ಕೂ ಹೆಚ್ಚು ಕಡೆಗಳಲ್ಲಿ ನಡೆದ ಬಾಂಬ್ ಸ್ಫೋಟಗಳಿಗೆ ಈತ ಪ್ರಮುಖ ಸಂಚುಕೋರನಾಗಿದ್ದ. ‘1994 ಮತ್ತು 1996ರಿಂದ 1998ರ ಮಧ್ಯೆ ನಡೆದ ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ದಿಲ್ಲಿ ಒಂದರಲ್ಲೇ ತುಂಡಾ ವಿರುದ್ಧ 21 ಪ್ರಕರಣ ದಾಖಲಾಗಿವೆ. ಸ್ಥಳೀಯವಾಗಿ ಸಿಗುವ ಯೂರಿಯಾ, ನೈಟ್ರಿಕ್ ಆ್ಯಸಿಡ್, ಪೊಟ್ಯಾಸಿಯಂ ಕ್ಲೋರೈಡ್, ನೈಟ್ರೊಬೆನ್ ಜಿನ್ ಮತ್ತು ಸಕ್ಕರೆಯಂತಹ ಪದಾರ್ಥಗಳಿಂದ ಬಾಂಬ್ ತಯಾರಿಸುವುದು ಹಾಗೂ ಜನನಿಬಿಡ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುವುದರ ಬಗ್ಗೆ ಈತ ಯುವಕರಿಗೆ ತರಬೇತಿ ನೀಡುತ್ತಿದ್ದನಂತೆ.