ಅಕೋಲಾ (ಮಹಾರಾಷ್ಟ್ರ) : ಕೊರೊನಾ ಸೋಂಕಿಗೆ ಬಲಿಯಾದ ತಂದೆಯ ಅಂತ್ಯ ಸಂಸ್ಕಾರ ನಡೆಸಲು ಸ್ವಂತ ಮಗನೇ ಮುಂದೆ ಬಾರದಿದ್ದಾಗ ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಿ ಮುಸಲ್ಮಾನರು ಮಾನವೀಯತೆ ಮೆರೆದಿದ್ದಾರೆ.
ನಗರದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿನಿಂದ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದರು, ಈ ವೇಳೆ ಅಧಿಕಾರಿಗಳು ತಂದೆಯ ಅಂತ್ಯ ಸಂಸ್ಕಾರ ನೆರೆವೇರಿಸುವಂತೆ ಮಗನಿಗೆ ತಿಳಿಸಿದ್ದರು. ಆದರೆ, ಕೊರೊನಾ ಹರಡುವ ಭೀತಿಯಿಂದ ಮೃತ ವ್ಯಕ್ತಿಯ ಮಗ ತಂದೆಯ ಅಂತ್ಯ ಸಂಸ್ಕಾರ ನಡೆಸಲು ನಿರಾಕರಿಸಿದ್ದಾನೆ. ಈ ವೇಳೆ ವಾಸಿಂ ಖಾನ್ ಮತ್ತು ಸಮೀರ್ ಖಾನ್ ಎಂಬ ಇಬ್ಬರು ಮುಸ್ಲಿಂ ಸಾಮಾಜಿಕ ಕಾರ್ಯಕರ್ತರು ಹಿಂದೂ ವಿಧಿ ವಿಧಾನಗಳಂತೆ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ ಎಂದು ನಗರ ಪಾಲಿಕೆಯ ಸಿಬ್ಬಂದಿ ಪ್ರಶಾಂತ್ ರಾಜೂರ್ಕರ್ ಎಂಬವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಚ್ಚಿ ಮೆಮನ್ ಸಮಾಜದ ಅಧ್ಯಕ್ಷ ಜಾವೆದ್ ಝಕರಿಯಾ, ಶವ ಸಂಸ್ಕಾರವಾಗಲಿ, ದಫನವಾಗಲಿ ನಾವು ಬಹಳ ಗೌರವದಿಂದ ಮಾಡುತ್ತೇವೆ. ಹಿಂದೂ ಆಗಲಿ ಮುಸ್ಲಿಂ ಆಗಲಿ ನಾವು ಬಹಳ ಭಕ್ತಿಯಿಂದ ವಿಧಿ ವಿಧಾನಗಳನ್ನು ನೆರವೇರಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಕೊರೊನಾ ಎದುರಿಸಲು ಭಯಸುತ್ತೇವೆ, ಆಗ ಮಾತ್ರ ಜಯಿಸಲು ಸಾಧ್ಯ ಎಂದಿದ್ದಾರೆ.