ಅಲೀಘಡ್(ಉತ್ತರ ಪ್ರದೇಶ): ಸಿಎಂ ಯೋಗಿ ಆದಿತ್ಯಾನಾಥ್ ರಾಜ್ಯದಲ್ಲಿ ಮತ್ತೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಬಿಜೆಪಿ ಸೇರಿದ್ದ ಮುಸ್ಲಿಂ ಮಹಿಳೆಯನ್ನು ಮಾಲೀಕ ಮನೆಯಿಂದ ಹೊರಹೋಗುವಂತೆ ಆದೇಶಿಸಿರುವ ಆರೋಪ ಪ್ರಕರಣ ಘಟನೆ ಅಲೀಘಡ್ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆ ಗುಲಿಸ್ತಾನ್ ಭಾನುವಾರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಆಕೆ ವಾಸವಾಗಿದ್ದ ಮನೆ ಮಾಲೀಕ ಮನೆ ಬಿಟ್ಟು ತೆರಳುವಂತೆ ಸೂಚಿಸಿದ್ದಾನೆ ಎನ್ನಲಾಗ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗುಲಿಸ್ತಾನ್ "ನಾನು ನಿನ್ನೆ ಬಿಜೆಪಿ ಸದಸ್ಯತ್ವ ಸ್ವೀಕರಿಸಿದ್ದೇನೆ. ಈ ವಿಷಯ ತಿಳಿಯುತ್ತಿದ್ದಂತೆ ನಾನು ವಾಸವಾಗಿದ್ದ ಮನೆ ಮಾಲೀಕ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ತಕ್ಷಣ ಮನೆ ಖಾಲಿ ಮಾಡುವಂತೆ ತಿಳಿಸಿದ್ದಾನೆ'' ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಲೀಘಡ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ಕುಲ್ಹಾರಿ ತಿಳಿಸಿದ್ದಾರೆ.