ಮುಂಬೈ: ನಗರದಲ್ಲಿ ಕೋವಿಡ್-19 ಸಂಬಂಧಿತ ಸಾವು-ನೋವುಗಳು ಅಧಿಕವಾಗುತ್ತಿದ್ದು, ಈ ಸಂದರ್ಭದಲ್ಲಿ ಮೇಯರ್ ಒಬ್ಬರು ನರ್ಸ್ ವೃತ್ತಿಗೆ ಮರಳಿದ್ದಾರೆ.
ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಮೇಯರ್ ಕಿಶೋರಿ ಪೆಡ್ನೇಕರ್ ನರ್ಸ್ ವೃತ್ತಿಗೆ ಮರಳಿದವರು. ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮೊದಲು ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ಕೊರೊನಾ ರೋಗಿಗಳ ಸೇವೆಗೆಂದು ಬಿವೈಎಲ್ ನಾಯರ್ ಆಸ್ಪತ್ರೆಗೆ ನರ್ಸ್ ಆಗಿ ಬಂದಿದ್ದಾರೆ.
ಮುಂಬೈನಲ್ಲಿರುವ ಕಂಟೈನ್ಮೆಂಟ್ ವಲಯಗಳ ಪೈಕಿ 231ವಲಯಗಳಲ್ಲಿ ಕಳೆದ 14 ದಿನಗಳಿಂದ ಒಂದೇ ಒಂದು ಕೊರೊನಾ ಪ್ರಕರಣ ಪತ್ತೆಯಾಗದ ಕಾರಣ ಅವುಗಳನ್ನು ಕಂಟೈನ್ಮೆಂಟ್ ಝೋನ್ ಪಟ್ಟಿಯಿಂದ ತೆಗೆದು ಹಾಕಿರುವುದಾಗಿ ಸ್ವಲ್ಪ ಸಮಯದ ಹಿಂದಷ್ಟೇ ಪೆಡ್ನೇಕರ್ ಮಾಹಿತಿ ನೀಡಿದ್ದರು.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗಾಗಲೇ 8 ಸಾವಿರ ಗಡಿ ದಾಟಿದ್ದು, 300ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.