ನವದೆಹಲಿ: ಲೋಕಸಭೆಯಲ್ಲಿ ಕರ್ನಾಟಕದ ಬಿಜೆಪಿ ಹಾಗೂ ಜೆಡಿಎಸ್ ಯುವ ಸಂಸದರ ನಡುವೆ ಮಾತಿನ ಸಮರ ನಡೆಯಿತು. 28 ವರ್ಷದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಪರಸ್ಪರ ವಾಕ್ಸಮರ ನಡೆಸಿದರು.
ರಾಜ್ಯದಲ್ಲಿ ಐಎಂಎ ಹಗರಣ ನಡೆದಿದ್ದು, ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ಅತಿ ಭ್ರಷ್ಟ ಸರ್ಕಾರವಿದೆ. ದೇಶ ಪ್ರಗತಿ ಕಾಣುತ್ತಿದ್ದರೂ ಕರ್ನಾಟಕ ಮಾತ್ರ ಹಿಂದುಳಿದಿದೆ. ಅಲ್ಲಿನ ಸಮ್ಮಿಶ್ರ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಕರ್ನಾಟಕದಲ್ಲಿ ಆದಷ್ಟು ಬೇಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಜನಸಾಮಾನ್ಯರ ಬೇಡಿಕೆ ಈಡೇರಲಿದೆ ಎಂದರು.
![mp prajwal revanna nad tejasvi surya](https://etvbharatimages.akamaized.net/etvbharat/prod-images/3664049_thumbnil_3x2_wdfd.jpg)
ತೇಜಸ್ವಿ ಸೂರ್ಯರ ಈ ಹೇಳಿಕೆಗೆ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದರು. ಸದನವನ್ನ ದಾರಿ ತಪ್ಪಿಸುವ ಕಾರ್ಯ ಮಾಡಬೇಡಿ. ರಾಜ್ಯದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಏನು ಕೆಲಸ ಮಾಡಿದೆ ಎಂಬುದು ನನಗೆ ಗೊತ್ತಿದೆ ಎಂದು ಲೋಕಾಯುಕ್ತ ಸಂತೋಷ್ ಹೆಗಡೆ ಅವರ ವರದಿ ಉಲ್ಲೇಖ ಮಾಡಿದರು. ಐಎಂಎ ಹಗರಣದಲ್ಲಿ ಸಚಿವ ರೋಷನ್ ಬೇಗ್ ಹೆಸರು ಕೇಳಿ ಬಂದಿದ್ದು, ಈಗಾಗಲೇ ಅವರನ್ನ ಪಕ್ಷದಿಂದ ವಜಾಗೊಳಿಸಲಾಗಿದೆ ಎಂದರು. ಈ ವೇಳೆ ಪ್ರಜ್ವಲ್ ರೇವಣ್ಣರ ಮಾತುಗಳಿಗೆ ಸಂಸದ ಪ್ರತಾಪ್ ಸಿಂಹ ಹಾಗೂ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದರು.