ಗ್ವಾಲಿಯರ್: ಗ್ವಾಲಿಯರ್ನ ಸೆಂಟ್ರಲ್ ಜೈಲಿನಲ್ಲಿ ಬಂದಿಯಾಗಿದ್ದ 25 ವರ್ಷದ ಕೊಲೆ ಅಪರಾಧಿಯೊಬ್ಬ ತನ್ನ ಜನನಾಂಗ ಕತ್ತರಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗಾಯಾಳು ಕೈದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎನ್ನಲಾಗಿದೆ.
"ವಿಷ್ಣು ಕುಮಾರ್ ಎಂಬಾತ ಕೊಲೆ ಅಪರಾಧಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಬೆಳಗ್ಗೆ 6.30 ರ ಸುಮಾರಿಗೆ ಜೈಲಿನ ಆವರಣದಲ್ಲಿರುವ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಚಮಚದಿಂದ ಜನನಾಂಗ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದಾನೆ." ಎಂದು ಜೈಲು ಅಧೀಕ್ಷಕ ಮನೋಜ್ ಸಾಹು ಹೇಳಿದರು.
ಕುಮಾರ್ನ ಚೀರಾಟ ಕೇಳಿ ಇತರ ಕೈದಿಗಳು ಹಾಗೂ ಸಿಬ್ಬಂದಿ ಧಾವಿಸುವಷ್ಟರಲ್ಲಿ ಕುಮಾರ್ ರಕ್ತದ ಮಡುವಿನಲ್ಲಿ ಹೊರಳಾಡುತ್ತಿದ್ದ. ತಕ್ಷಣ ಆತನನ್ನು ಜಯಾರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಸಾಹು ತಿಳಿಸಿದರು.
ರಾತ್ರಿ ಕನಸಿನಲ್ಲಿ ಶಿವ ಭಗವಾನ್ ಕಾಣಿಸಿಕೊಂಡು ನಿನ್ನ ಖಾಸಗಿ ಅಂಗವನ್ನು ಸಮರ್ಪಿಸು ಎಂದು ಹೇಳಿದ್ದರಿಂದ ಹಾಗೆ ಮಾಡಿದೆ ಎಂದು ವಿಚಾರಣೆ ಸಮಯದಲ್ಲಿ ವಿಷ್ಣು ಕುಮಾರ್ ಬಾಯ್ಬಿಟ್ಟಿದ್ದಾನೆ. ಭಿಂಡ್ ಜಿಲ್ಲೆಯ ನಿವಾಸಿ ಕುಮಾರ್ 2018 ರಿಂದ ಜೈಲಿನಲ್ಲಿದ್ದಾನೆ.