ಭೋಪಾಲ್: ಕಳೆದ ವಾರ ಮಧ್ಯಪ್ರದೇಶದ ಸಾಗರ್ ನಗರದಲ್ಲಿ 24 ವರ್ಷದ ದಲಿತ ವ್ಯಕ್ತಿಗೆ ಬೆಂಕಿ ಹಚ್ಚಲಾಗಿತ್ತು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆತ, ಇಂದು ಬೆಳಗ್ಗೆ ನವದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಘಟನೆ ನಡೆದ ತಕ್ಷಣ ಪೊಲೀಸರು ದೂರು ತಂಗೊಡಿಲ್ಲ ಎಂಬುದು ಬಿಜೆಪಿ ವಾದ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡ್ತಿದ್ದಾರೆ.
ಸಾಗರ್‌ನ ಮೋತಿನಗರ ಪ್ರದೇಶದ ನಿವಾಸಿ ಧನ್‌ಪ್ರಸಾದ್ ಅಹಿರ್ವಾರ್ ಅವರಿಗೆ ಜನವರಿ 14 ರಂದು ಬೆಂಕಿ ಹಚ್ಚಲಾಯಿತು. ಅವರಿಗೆ ಶೇ. 70ರಷ್ಟು ಸುಟ್ಟಗಾಯಗಳಾಗಿದ್ದವು, ಮೊದಲು ಸಾಗರ್ನಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ, ಬಳಿಕ ಭೋಪಾಲ್ಗೆ ದಾಖಲಿಸಲಾಗಿತ್ತು.
ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ನಾಥ್ ಅವರು ಟ್ವೀಟ್ ಮೂಲಕ ಧನ್‌ಪ್ರಸಾದ್ ಅಹಿರ್ವಾರ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಅವರ ಕುಟುಂಬಕ್ಕೆ ಅಗತ್ಯವಿರುವ ಸಹಾಯ ಮಾಡುವುದಾಗಿ ಕೂಡ ಹೇಳಿದ್ದಾರೆ.
ನಂತರ ಅವರನ್ನು ಏರ್ ಆಂಬ್ಯುಲೆನ್ಸ್‌ನಲ್ಲಿ ದೆಹಲಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಾದ ಚುಟ್ಟು, ಅಜ್ಜು ಪಠಾಣ್, ಕಲ್ಲು ಮತ್ತು ಇರ್ಫಾನ್ ಅವರನ್ನು ಬಂಧಿಸಲಾಗಿದೆ ಎಂದು ಸಾಗರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ತಿಳಿಸಿದ್ದಾರೆ.
ಪೊಲೀಸರು ಸಮಯಕ್ಕೆ ಸರಿಯಾಗಿ ನಡೆದುಕೊಂಡಿದ್ದರೆ ಸಂತ್ರಸ್ತನ ಜೀವ ಉಳಿಸಬಹುದಿತ್ತು. ಪೊಲೀಸರ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದಾಗಿ, ಒಂದು ಬಡ ದಲಿತ ಕುಟುಂಬವು ತನ್ನ ಮಗನನ್ನು ಕಳೆದುಕೊಂಡಿದೆ. ಈ ಘಟನೆ ನಡೆಯುವ ಮೊದಲೇ ಅಹಿರ್ವಾರ್ ಮೂರು ಬಾರೀ ಪೊಲೀಸರನ್ನು ಸಂಪರ್ಕಿಸಿದ್ದಾರೆ. ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಆದ್ರೆ ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ರಾಕೇಶ್ ಸಿಂಗ್ ದೂರಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ಬಿಜೆಪಿಯನ್ನು ಆರೋಪಿಸಿದ್ದು, ಇಂತ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸಬಾರದು. ಸರ್ಕಾರ ಸಮಯೋಚಿತ ಕ್ರಮ ಕೈಗೊಂಡಿದೆ ಮತ್ತು
ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಅವರ ನಿರ್ದೇಶನದ ಮೇರೆಗೆ ಉತ್ತಮ ಚಿಕಿತ್ಸೆಯನ್ನು ಕೂಡ ಕೊಡಿಸಲಾಗಿತ್ತು. ಆದ್ರೆ ಅವರನ್ನು ಉಳಿಸಿಕೊಳ್ಳು ಸಾಧ್ಯವಾಗಿಲ್ಲ. ಬಿಜೆಪಿಯವರು ಸುಳ್ಳು ಹೇಳುವ ಮೂಲಕ ಸಮಾಜದ ಸ್ವಾಸ್ತ್ಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆಂದು ರಾಜ್ಯ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ತಿರುಗೇಟು ನೀಡಿದ್ದಾರೆ.