ಭೋಪಾಲ್: ಭೋಪಾಲ್‌ನಲ್ಲಿ ನಿದ್ದೆ ಮಾತ್ರೆಗಳನ್ನು ಸೇವಿಸಿ ಅತ್ಯಾಚಾರಕ್ಕೊಳಪಟ್ಟಿದ್ದ ಸಂತ್ರಸ್ತ ಬಾಲಕಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ.
ಮಧ್ಯಪ್ರದೇಶದ ರಾಜಧಾನಿಯ ಆಶ್ರಯ ಮನೆಯಲ್ಲಿ ಸೋಮವಾರದಂದು ಅಧಿಕ ಪ್ರಮಾಣದ ಸ್ಲೀಪಿಂಗ್ ಟ್ಯಾಬ್ಲೆಟ್ಸ್ಗಳನ್ನು ಸಂತ್ರಸ್ತೆ ಸೇವಿಸಿದ್ದಳು. ಬಳಿಕ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಟ್ಯಾಬ್ಲೆಟ್ಸ್ಗಳನ್ನು ತೆಗೆದುಕೊಂಡ ಹಿನ್ನೆಲೆ ಆಕೆಯ ಸ್ಥಿತಿ ಗಂಭೀರವಾಗಿತ್ತು. ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಐ. ಡಿ. ಚೌರಾಸಿಯಾ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಶೀಘ್ರದಲ್ಲೇ ನಡೆಯಲಿದೆಯೆಂದು ತಿಳಿಸಿದರು.
ಸ್ಥಳೀಯ ಪತ್ರಿಕೆ ನಡೆಸುತ್ತಿದ್ದ ಪ್ಯಾರೆ ಮಿಯಾ (68) ವಿರುದ್ಧ ಕಳೆದ ಜುಲೈನಲ್ಲಿ, ಐವರು ಅಪ್ರಾಪ್ತೆಯರ ಮೇಲೆ ಹಲವು ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿತ್ತು. ಆ ಐವರು ಸಂತ್ರಸ್ತರನ್ನು ಭದ್ರತೆಯ ದೃಷ್ಟಿಯಿಂದ ಸರ್ಕಾರಿ ಆಶ್ರಯ ಮನೆಯಲ್ಲಿ ಇರಿಸಲಾಗಿತ್ತು. ಅವರಲ್ಲಿ ಇಬ್ಬರು ಬಾಲಕಿಯರು ಅನಾರೋಗ್ಯಕ್ಕೆ ತುತ್ತಾಗಿ ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.